ಪಿಲಾತಬೆಟ್ಟು: 'ವಾರ್ತಾಭಾರತಿ' ವರದಿ ಫಲಶ್ರುತಿ; ಹೊಸ ಕೊಳವೆ ಬಾವಿ ಕಾಮಗಾರಿಗೆ ಚಾಲನೆ

Update: 2019-03-15 17:29 GMT

ಬಂಟ್ವಾಳ, ಮಾ. 15: ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಗೆ ಕುಡಿಯುವ ನೀರಿನ ಸಮಸ್ಯೆ ವಾರದ ಬಳಿಕ ಮುಕ್ತಿ ಸಿಕ್ಕಿದ್ದು, "ವಾರ್ತಾಭಾರತಿ" ವರದಿ ಫಲಶ್ರುತಿಯಿಂದ ಹೊಸ ಕೊಳವೆ ಬಾವಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಯಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋದ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ಕೊಳವೆ ಬಾವಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಕಳೆದ ಒಂದು ವಾರದಿಂದ ಹನಿ ನೀರಿಗೂ ಪರದಾಡುತ್ತಿದ್ದ ಗ್ರಾಮಸ್ಥರ ಮುಗದಲ್ಲಿ ನಗುವಿನ ಬುಗ್ಗೆ ಚಿಮ್ಮಿದೆ.

ಗ್ರಾಮಸ್ಥರು ಸೂಚಿಸಿದ ಜಾಗದಲ್ಲೇ ಅಧಿಕಾರಿಗಳು ಜಲ ಬಿಂದು ಗುರುತಿಸಿದ್ದು, ಕೊಳವೆಬಾವಿ ಕೊರೆಯುವ ಕಾಮಗಾರಿ ನಡೆಯುತ್ತಿದೆ. ಈ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಿ, ಪಂಪ್ ಮೋಟಾರ್, ಪೈಪ್‍ಲೈನ್ ನಿರ್ಮಿಸಿ, ನಾಳೆಯೊಳಗೆ ಜನರಿಗೆ ನೀರನ್ನು ಪೂರೈಸುವುದಾಗಿ ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಈ ಮೊದಲಿದ್ದ ಕೊಳವೆ ಬಾವಿಯು ಸಂಪೂರ್ಣವಾಗಿ ಬತ್ತಿ ಹೋಗಿವೆ. ಈ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿಗಾಗಿ ಪಂಚಾತಯತ್‍ನ ಕ್ರಿಯಾ ಯೋಜನೆಯಡಿ 1 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಕಾಮಗಾರಿಗೆ ಮೀಸಲಿಡಲಾಗಿದೆ ಎಂದ ಅವರು, ಒಂದೆಡೆ ಕೊಳವೆ ಬಾವಿ ಏಜೆನ್ಸಿಯವರ ಮುಷ್ಕರ, ಮತ್ತೊಂದೆಡೆ ಚುನಾವಣಾ ನೀತಿ ಸಂಹಿತೆಯಿಂದ ಕಾಮಗಾರಿಗೆ ತೊಡಕು ಉಂಟಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

ವಾರ್ತಾಭಾರತಿ ವರದಿ ಫಲಶ್ರುತಿ

ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಯಲ್ಲಿರುವ ಕೊಳವೆ ಬಾವಿಯು ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿತ್ತು. ನೀರಿನ ಸಂಕಷ್ಟದ ಬಗದ್ಗೆ ಅಲ್ಲಿನ ನಿವಾಸಿಯೊಬ್ಬರು ಪತ್ರಿಕೆಗೆ ಅಲವತ್ತುಕೊಂಡಿದ್ದರು. 

"ನೀರಿಗಾಗಿ ಪರಿತಪಿಸುತ್ತಿರುವ ಪುಂಜಾಲಕಟ್ಟೆಯ ಗ್ರಾಮಸ್ಥರು !, ಹೊಸ ಬೋರ್‍ವೆಲ್ ಕೊರೆಯಲು ಏಜೆನ್ಸಿಗಳಿಗೆ ಜಿಎಸ್‍ಟಿ ಸಂಕಷ್ಟ" ಎಂಬ ಶೀರ್ಷಿಕೆಯಡಿ "ವಾರ್ತಾಭಾರತಿ"ಯು ಮಾ. 14ರಂದು ವಿಶೇಷ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿತ್ತು. ಇದನ್ನು ಮನಗಂಡ ಅಧಿಕಾರಿಗಳು, ಇಂಜಿನಿಯರ್ ಹಾಗೂ ಗ್ರಾಪಂ ಮಾ. 15ರಂದು ಹೊಸ ಕೊಳವೆ ಬಾವಿ ಕೊರೆಯುವ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಶೀಘ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News