ನಿಸ್ವಾರ್ಥ ಸೇವೆಯಿಂದ ವೃತ್ತಿರಂಗದ ಅಭಿವೃದ್ಧಿ: ಕಾಳಹಸ್ತೇಂದ್ರ ಸ್ವಾಮೀಜಿ

Update: 2019-03-15 17:50 GMT

ಮೂಡುಬಿದಿರೆ: ನಿಸ್ವಾರ್ಥ ಸೇವೆಯಲ್ಲೇ ಸುಖ ಕಾಣುವ ಸ್ವಯಂಸೇವಕ ತಾನು ಕೆಲಸ ಮಾಡುವ ರಂಗದ ಬೆಳವಣಿಗೆಗೆ ಕಾರಣನಾಗುತ್ತಾನೆ. ಆತ ಬೇಲಿ ಹಾಕಿ ಸಾಕಿದ ಮಾವಿನ ಗಿಡವಲ್ಲ. ಹಾದಿ ಬದಿ  ಸಿಕ್ಕ ನೀರು, ಗೊಬ್ಬರ ಸಾರ ಹೀರಿ ಬೆಳೆದು, ಕಲ್ಲೇಟು ತಿಂದರೂ ಫಲವನ್ನು ಎಲ್ಲರಿಗೂ ಕೊಡುವ ಮಾವಿನ ಮರ ಎಂದು  ಶ್ರೀಮತ್ ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠಾಧೀಶ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವದಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ  ಸಾಧಕರನ್ನು ಸಮ್ಮಾನಿಸಿ ಆಶೀರ್ವಚನವಿತ್ತ ಅವರು `ಭಕ್ತಾದಿಗಳ ಸ್ವಯಂಸೇವೆಯಿಂದಲೇ ಶ್ರೀ ಕ್ಷೇತ್ರವು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ' ಎಂದು ಹೇಳಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಪುರೋಹಿತ್ ಎನ್. ಜಯಕರ ಆಚಾರ್ಯ ಅಧ್ಯಕ್ಷತೆ ವಹಿಸಿ ಕ್ಷೇತ್ರದ ಬೆಳವಣಿಗೆಯ ಚಿತ್ರಣವಿತ್ತರು. ಮುಖ್ಯ ಆತಿಥಿ ಗಳಾಗಿ ಗೋಕರ್ಣ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಸ್ಥಾನದ  ಆಡಳಿತ ಮೊಕ್ತೇಸರ ಮಧುಕರ ಚಂದ್ರಶೇಖರ ಆಚಾರ್ಯ ಹಾಗೂ ಮೂಡುಬಿದಿರೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ ಅವರು ಭಾಗವಹಿಸಿದ್ದರು. ದೇವಳಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಕೊಡುಗೆಯನ್ನು ಉಲ್ಲೇಖಿಸಿದ ಹೊಳ್ಳರು  ದೇವಳಗಳ ನಡುವಿನ ಸೌಹಾರ್ದ ಸಂಬಂಧ ಸಮಾಜದ ಒಟ್ಟು  ಸಾಮರಸ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ' ಎಂದರು.

ಸಮ್ಮಾನ: ಎರಕ ಶಿಲ್ಪಿ ಶಂಕರಪುರದ ಬಿಳಿಯಾರು ಗಣಪತಿ ಆಚಾರ್ಯ, ಮೂಡುಬಿದಿರೆ ವಿಶ್ವಕರ್ಮ ಸಂಸ್ಕøತಿ ಪ್ರತಿಷ್ಠಾನದ ಸಂಚಾಲಕ ಕುಂಜೂರು ಗಣೇಶ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ಪುತ್ತಿಗೆ ಪಾಲಡ್ಕ ಗ್ರಾಮ ಕೂಡುವಳಿಕೆ ಮೊಕ್ತೇಸರ ಹರಿಶ್ಚಂದ್ರ ಆಚಾರ್ಯ ಕುಂಗೂರು ಹರಿಶ್ಚಂದ್ರ ಆಚಾರ್ಯ, ಕಾಷ್ಠಶಿಲ್ಪಿ  ಶ್ರೀಧರ ಆಚಾರ್ಯ ಮುದರಂಗಡಿ ವಿದ್ಯಾನಗರ ಹಾಗೂ ಯುವ ಗಾಯಕ, ಕಲಾಸಿಂಧು  ಜಗದೀಶ ಆಚಾರ್ಯ ಪುತ್ತೂರು ಅವರಿಗೆ ಗೌರವಾರ್ಪಣೆ ನಡೆಯಿತು.

ಸಮ್ಮಾನಿತ ಕುಂಜೂರು ಗಣೇಶ ಆಚಾರ್ಯ ಮಾತನಾಡಿ, `ಶಿಲ್ಪಿಗಳು ದೇವಳವನ್ನು ಬಿಟ್ಟು ಕೊಡಬೇಕೇ ಹೊರತು ಅನ್ಯರಲ್ಲ. ಆದರೆ ಎಲ್ಲ ಕಡೆ ನಿರ್ಮಾಣಕಾರ್ಯ ನಡೆದ ಬಳಿಕ ಶಿಲ್ಪಿಗಳನ್ನು  ಕಡೆಗಣಿಸುವ ಅತ್ಯಂತ ವಿಷಾದಕರ ವಿದ್ಯಮಾನಗಳು ನಡೆಯುತ್ತಿವೆ' ಎಂದರು. 

ಗೀತಾ ಯೋಗೀಶ್ ಆಚಾರ್ಯ, ಶಾಂತಲಾ ಸೀತಾರಾಮ ಆಚಾರ್ಯ, ಶಿವಪ್ರಸಾದ್‍ಆಚಾರ್ಯ, ಮಹೇಶ್ ಎನ್. ಗಂಟಾಲ್ಕಟ್ಟೆ ಮತ್ತು ಯೋಗೀಶ  ಆಚಾರ್ಯ ಸಮ್ಮಾನ ಪತ್ರಗಳನ್ನು ವಾಚಿಸಿದರು.  ಶೇ.100 ಕಾಲಾವಧಿ ಶಿಸ್ತುಕಾಣಿಕೆ ಸಂಗ್ರಹಿಸಿದ ಕೂಡುವಳಿಕೆ ಮೊಕ್ತೇಸರರನ್ನು ಗೌರವಿಸಲಾಯಿತು ಹಾಗೂ ಕಾಣಿಕೆ ಡಬ್ಬಿಗಳಲ್ಲಿ ಹೆಚ್ಚು ಧನ ಸಂಗ್ರಹಿಸಿದವರನ್ನು ಗೌರವಿಸಲಾಯಿತು. ಎರಡನೇ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ ವಿವರ ನೀಡಿದರು. ಮೂರನೇ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ಗೋಪಾಲ ಆಚಾರ್ಯ, ಸೇವಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು. ಆಡಳಿತ ಸಮಿತಿ ಸದಸ್ಯರಾದ  ಪುರೋಹಿತ್ ಜಗನ್ನಾಥ ಆಚಾರ್ಯ ವಂದಿಸಿ, ಧನಂಜಯ, ಬೆಳುವಾಯಿ ಭಾಸ್ಕರ ಆಚಾರ್ಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News