ಗಾಂಧಿಕಟ್ಟೆ ಮರುನಿರ್ಮಾಣಕ್ಕೆ ಚಾಲನೆ: ಗಾಂಧೀಜಿ ಪ್ರತಿಮೆ ತಾತ್ಕಾಲಿಕ ತೆರವು

Update: 2019-03-17 16:56 GMT

ಪುತ್ತೂರು: ಇಲ್ಲಿನ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಐತಿಹಾಸಿಕ ಗಾಂಧಿಕಟ್ಟೆಯನ್ನು ಈಗಿರುವ ಎತ್ತರದಿಂದ ಕೆಳಗಿಳಿಸಿ ರಸ್ತೆಗೆ ಸಮನಾಗಿ ಮರು ನಿರ್ಮಿಸುವ ಉದ್ದೇಶದಿಂದ ರವಿವಾರ ಗಾಂಧಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಿ, ಕಟ್ಟೆಯನ್ನು ಜೆಸಿಪಿ ಯಂತ್ರದ ಮೂಲಕ ಕೆಡವಲಾಯಿತು.

ಪುತ್ತೂರು ನಗರಸಭೆಯ ವತಿಯಿಂದ ಕಳೆದ ಹಲವು ವರ್ಷಗಳ ಹಿಂದೆ ಗಾಂಧೀಜಿ ನೆನಪಿಗಾಗಿ ಈ ಗಾಂಧಿ ಕಟ್ಟೆಯನ್ನು ನಿರ್ಮಿಸಲಾಗಿತ್ತು. 1934 ರಲ್ಲಿ ಮಹಾತ್ಮ ಗಾಂಧೀಜಿಯವರು ಪುತ್ತೂರಿಗೆ ಆಗಮಿಸಿದ್ದು, ಇಲ್ಲಿದ್ದ ಅಶ್ವತ್ಥ ಮರದ ಅಡಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ನೆನಪಿಗಾಗಿ ಇಲ್ಲಿ ಗಾಂಧಿ ಕಟ್ಟೆಯನ್ನು ನಿರ್ಮಿಸಿ, ಗಾಂಧೀಜಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು ಹಾಗೂ ಇದೇ ಜಾಗದಲ್ಲಿದ್ದ ಅಶ್ವತ್ಥ ಮರವೂ ಇದೆ.

ಗಾಂಧಿ ಕಟ್ಟೆ ನಿರ್ಮಾಣಕ್ಕೆ ಪುತ್ತೂರು ನಗರಸಭೆಯ ವತಿಯಿಂದ ರೂ. 8 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ನೂತನ ಗಾಂಧಿಕಟ್ಟೆ ನಿರ್ಮಾಣ ಕಾರ್ಯ ನಡೆಯಲಿದೆ. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ನಿರ್ಮಿಸುವ ಯೋಜನೆಯನ್ನು ನಗರಸಭೆ ಹಾಕಿಕೊಂಡಿದೆ. ಅಶ್ವತ್ಥ ವೃಕ್ಷಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತದೆ.

ಇಲ್ಲಿನ ಕೆಎಸ್ಸಾರ್ಟಿಸಿ ನೂತನ ಬಸ್ ನಿಲ್ದಾಣದ ಸಂದರ್ಭದಲ್ಲಿಯೂ ಗಾಂಧಿ ಕಟ್ಟೆ ಮತ್ತು ಅಶ್ವತ್ಥ ವೃಕ್ಷವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಕಾಮಗಾರಿ ನಡೆಸಲಾಗಿತ್ತು. ಅಶ್ವತ್ಥ ಮರದಲ್ಲಿರುವ ಹಕ್ಕಿಗಳ ಹಿಕ್ಕೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು  ಮರವನ್ನು ತೆರವುಗೊಳಿಸಬೇಕು ಎಂಬ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ, ವಾದ ಪ್ರತಿವಾದಗಳೂ ನಡೆದಿತ್ತು. ಪರಿಸರ ಆಸಕ್ತರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಕಳೆದ ತಿಂಗಳು ಮರದ ಕೆಲವೊಂದು ಕೊಂಬೆಗಳನ್ನು ತೆರವುಮಾಡಲಾಗಿತ್ತು.

ಈ ನಡುವೆ ಗಾಂಧಿ ಕಟ್ಟೆ ಹಾಗೂ ಅಶ್ವತ್ಥ ಮರದ ಕೆಳ ಭಾಗದ ಸುತ್ತಲಿನ ಮಣ್ಣು ಕುಸಿತಗೊಂಡು ಅಪಾಯ ಸಂಭವಿಸುವ ಸ್ಥಿತಿಯಲ್ಲಿತ್ತು. ಅಲ್ಲದೆ ಗಾಂಧಿಕಟ್ಟೆಯ ನಿರ್ವಹಣೆಯ ಬಗ್ಗೆಯೂ ಅಪಸ್ವರ ಕೇಳಿ ಬಂದಿತ್ತು.  ಇದೀಗ ಗಾಂಧಿಕಟ್ಟೆ ಹಾಗೂ ಪ್ರತಿಮೆಯನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗಿದೆ. ಜೆಸಿಬಿ ಯಂತ್ರದ ಮೂಲಕ ಸಮತಟ್ಟುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News