ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಜೆಡಿಎಸ್ ಚಿಹ್ನೆಯಡಿ ಪ್ರಮೋದ್ ಮಧ್ವರಾಜ್ ಸ್ಪರ್ಧೆ ?

Update: 2019-03-18 09:47 GMT

ಉಡುಪಿ, ಮಾ.18: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರಗಳು ಸೀಟು ಹಂಚಿಕೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡಲಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕಣಕ್ಕೀಳಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೆ ಹೊರಬರಬೇಕಾಗಿದೆ.

ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪ್ರಮೋದ್ ಮಧ್ವರಾಜ್‌ರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಪ್ರಮೋದ್ ಕಾಂಗ್ರೆಸ್ ನಾಯಕರ ಅಭಿಪ್ರಾಯಕ್ಕಾಗಿ ಮುಂದೆ ನೋಡುತ್ತಿದ್ದಾರೆ. ಎರಡು ಪಕ್ಷಗಳು ಒಪ್ಪಿದರೆ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುವುದು ಖಚಿತ ಎಂಬುದು ಮೂಲಗಳು ತಿಳಿಸಿವೆ.

ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಇಲ್ಲಿ ಎರಡೂ ಪಕ್ಷ ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಒಬ್ಬ ಅಭ್ಯರ್ಥಿ ಯನ್ನು ಚುನಾವಣೆಗೆ ನಿಲ್ಲಿಸಲಿದೆ. ಚಿಹ್ನೆ ಮಾತ್ರ ಜೆಡಿಎಸ್ ಆಗಿರುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಆಗಬೇಕೆಂಬುದು ಚರ್ಚೆ ನಡೆಯುತ್ತಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸ್ಪರ್ಧಿಸುವ ಕುರಿತು ನನ್ನ ಅಭಿಪ್ರಾಯ ಕೇಳಿದ್ದಾರೆ. ನಾನು ಕಾಂಗ್ರೆಸ್ ವರಿಷ್ಠರು, ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೇನೆ. ಆ ತೀರ್ಮಾನ ಈವರೆಗೆ ಅಂತಿಮ ಆಗಿಲ್ಲ ಎಂದು ಅವರು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿದೆ. ಆದುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ಇಲ್ಲಿ ಸ್ಪರ್ಧಿಸಿದರೆ ನಾವು ಪ್ರಬಲರಾಗುತ್ತೇವೆ. ಫಲಿತಾಂಶ ಕೊಡುವುದು ಜನರ ಕೈಯಲ್ಲಿದೆ. ಈ ಹಿಂದೆ ಚುನಾವಣೆಗಳು ಕೂಡ ಅದಕ್ಕೆ ಸಾಕ್ಷಿಯಾಗಿವೆ. ಅನಿರೀಕ್ಷಿತ ಫಲಿತಾಂಶ ಕೊಡುವುದೇ ಪ್ರಜಾ ಪ್ರಭುತ್ವದ ವ್ಯವಸ್ಥೆಯ ಪ್ರಮುಖ ಅಂಶ ಆಗಿದೆ ಎಂದು ಅವರು ಹೇಳಿದರು.

ಆದರೆ ಈ ಅನಿರೀಕ್ಷಿತ ಬೆಳವಣಿಗೆಗೆ ಕಾಂಗ್ರೆಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಕೆಲವರು ಪ್ರಮೋದ್ ಮಧ್ವರಾಜ್ ಅವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ನಾಯಕರು ಈ ನಿರ್ಧಾರವನ್ನು ಬೆಂಬಲ ಸೂಚಿಸಿದ್ದಾರೆ. ಉಡುಪಿ ಜಿಲ್ಲಾ ಜೆಡಿಎಸ್ ವಲಯದಲ್ಲಿ ಪ್ರಮೋದ್ ಮಧ್ವರಾಜ್ ಸ್ಪರ್ಧೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದರಿಂದ ಕಾರ್ಯ ಕರ್ತರಲ್ಲಿ ಹೊಸ ಹುರುಪು ಬರಲಿದೆ ಎಂದು ಜೆಡಿಎಸ್ ಮುಖಂಡರು ಹೇಳಿ ಕೊಂಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಾಕ ಚರ್ಚೆ ಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News