ಬಿ.ಸಿ.ರೋಡ್: ಕುಡಿಯುವ ನೀರಿನ ಪೈಪ್ ಒಡೆದು ಕೃತಕ ನೆರೆ

Update: 2019-03-18 14:35 GMT

ಬಂಟ್ವಾಳ, ಮಾ. 18: ಸರ್ವಿಸ್ ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕುಡಿಯುವ ನೀರಿನ ಪೈಪ್ ಒಡೆದು ನೀರು ಹರಿದ ಪರಿಣಾಮ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಕೆಲ ಹೊತ್ತುಗಳ ಕಾಲ ಕೃತಕ ನೆರೆ ಸೃಷ್ಟಿಯಾಯಿತು.

ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿ ಪೈಪ್‍ಲೈನ್ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ ದುರಸ್ತಿ ಸರಿಯಾಗದ ಕಾರಣ ನೀರು ಸರಬರಾಜಿನ ವೇಳೆ ಪೈಪ್ ಒಡೆದು ಈ ಅವಾಂತರ ಸೃಷ್ಟಿಯಾಗಿ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಒಂದೆಡೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೆಲ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಇನ್ನೊಂದೆಡೆ  ನೀರು ಸರಾಗವಾಗಿ ಸೋರಿಕೆ ಯಾಗುತ್ತಿದ್ದರೂ, ಪುರಸಭೆ ಇದರ ಹತ್ತಿರ ಸುಳಿದಿಲ್ಲ, ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದ ಕಾರಣ ಕೇಳುವವರೇ ಇಲ್ಲದಂತಾಗಿದೆ. 

ಅದೇ ಸ್ಥಳದಲ್ಲಿ ಮಂಗಳೂರಿಗೆ ತೆರಳುವ ಬಸ್‍ಗಳು ನಿಲುಗಡೆಯಾಗುವುದರಿಂದ ಪ್ರಯಾಣಿಕರು ಬಸ್ ಹತ್ತಲು, ಇಳಿಯಲು ಪರದಾಡಬೇಕಾಯಿತು. ರಸ್ತೆಯಿಡೀ ನೀರು ತುಂಬಿಕೊಂಡ ಕಾರಣ ಮಳೆಗಾಲದ ಸನ್ನಿವೇಷವನ್ನು ನೆನಪಿಸಿದಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News