ಮೈತ್ರಿಕೂಟ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ :ವಿಟ್ಲ ಮುಹಮ್ಮದ್‍ ಕುಂಞಿ

Update: 2019-03-18 15:37 GMT

ಬೆಳ್ತಂಗಡಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್‍ಕುಂಞಿ ಹೇಳಿದರು. 

ಅವರು ಸೋಮವಾರ ಬೆಳ್ತಂಗಡಿ ಸುವರ್ಣ ಆರ್ಕೆಡ್‍ನಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 

ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕುಮಾರಸ್ವಾಮಿಯವರ ಸಮ್ಮಿಶ್ರ  ಸರಕಾರ ರೈತರ, ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದೆ. ಅಲ್ಪಾವಧಿಯಲ್ಲಿ ರಾಜ್ಯದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿ, ಮತ ಯಾಚನೆ ಮಾಡೋಣ. ವಿರೋಧ ಪಕ್ಷದವರು ಸರಕಾರ ಉರುಳಿಸಲು ಪ್ರಯತ್ನ ಕೈಗೊಂಡರೂ ದೇವರು ಮತ್ತು ಜನರ ಆಶೀರ್ವಾದದಿಂದ ಅದು ಸಾಧ್ಯವಾಗಿಲ್ಲ ಎಂದರು. 

ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಸಿಎಂ ಕುಮಾರಸ್ವಾಮಿಯವರು ಬಜೆಟ್‍ನಲ್ಲಿ ಹೇಳಿದ ಎಲ್ಲಾ ಅಂಶಗಳನ್ನು ಮಾಡಿ ತೋರಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಎಲ್ಲೂ ಕೋಮು ಗಲಭೆಗಳಾಗಿಲ್ಲ. ಅಂತಹಾ ರೌಡಿಗಳನ್ನು ಜೈಲಿಗಟ್ಟುವ ಕೆಲಸ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು ಅವರ ಪರ ಕೆಲಸ ಮಾಡಲು ನಮ್ಮ ಮೇಲೆ ಹೈಕಮಾಂಡ್ ಆದೇಶಿಸಿದ್ದು ಆ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಯುವ ಜನತಾದಳ ಕಾರ್ಯದರ್ಶಿ ಮಧುಸೂಧನ್ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್. ಹೆಗ್ಡೆ, ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪಕ್ಷದ ತಾ. ಅಧ್ಯಕ್ಷ ಪ್ರವೀಣ್ಚಂದ್ರ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ವೇದಿಕೆಯಲ್ಲಿ ಜೆಡಿಎಸ್ ಪದಾಧಿಕಾರಿಗಳು ಮತ್ತು ಮುಖಂಡರಾದ ರಾಮ ಆಚಾರಿ, ಲೋಕೇಶ್, ಪ್ರಕಾಶ್ ಹೆಬ್ಬಾರ್,  ಸಿಂಧೂದೇವಿ, ಸೂರಜ್ ವಳಂಬ್ರ, ಅಬ್ದುಲ್ ರಹಿಮಾನ್ ಪೆರಿಂಜೆ, ಚಂಚಲಾ ಕುಂದರ್, ಅನಿತಾ, ಶಶಿಕಲಾ, ಚಂದ್ರಾವತಿ, ಪುನೀತ್ ಕುಮಾರ್ ಉಪಸ್ಥಿತರಿದ್ದರು.

ಜಿಲ್ಲಾ ಯುವ ಘಟಕದ ಸಂ. ಕಾರ್ಯದರ್ಶಿ ಕಿಶೋರ್ ಶೆಟ್ಟಿ ಅರಸಿನಮಕ್ಕಿ ವಂದಿಸಿದರು.

ಜೆಡಿಎಸ್ ನಾಯಕರಿಂದ ಬಂಗೇರರ ಭೇಟಿ

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಕೆ.ವಸಂತ ಬಂಗೇರ ಅವರನ್ನು ಬೆಳ್ತಂಗಡಿಯಲ್ಲಿ ಜೆಡಿಎಸ್‍ನ ಮುಖಂಡರುಗಳು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬೆಳ್ತಂಗಡಿಯಲ್ಲಿ ಜೆಡಿಎಸ್‍ನಿಂದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆದ ಬಳಿಕ ಬಂಗೇರ ಅವರನ್ನು ಸಂಪರ್ಕಿಸಿದ ಜೆಡಿಎಸ್‍ನ ಹಿರಿಯ ನಾಯಕ ಅಮರನಾಥ ಶೆಟ್ಟಿ, ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್‍ ಕುಂಞಿ, ತಾ. ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್, ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಭೇಟಿ ಮಾಡಿ ಸಮಾಲೋಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News