ಕುಂದಾಪುರ ಬಿಜೆಪಿ ತಾಪಂ ಸದಸ್ಯನ ಕ್ವಾರೆ ಸಹಿತ ಅಕ್ರಮ ಗಣಿಗಾರಿಕೆಗೆ ದಾಳಿ: ಎಂಟು ಮಂದಿ ಸೆರೆ

Update: 2019-03-18 16:18 GMT

ಕುಂದಾಪುರ, ಮಾ.18: ಕೋಟ ಹಾಗೂ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಸೋಮವಾರ ಮಧ್ಯಾಹ್ನ ವೇಳೆ ದಾಳಿ ನಡೆಸಿದ ಕಾರ್ಕಳ ಎಎಸ್ಪಿ ಪಿ. ಕೃಷ್ಣಕಾಂತ್ ನೇತೃತ್ವದ ಪೊಲೀಸ್ ತಂಡ ಒಟ್ಟು 8 ಮಂದಿಯನ್ನು ಬಂಧಿಸಿ, ವಾಹನ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ನೆಂಚಾರಿನಲ್ಲಿರುವ ಕುಂದಾಪುರ ತಾಪಂ ಬಿಜೆಪಿ ಸದಸ್ಯ ಚಂದ್ರಶೇಖರ್ ಶೆಟ್ಟಿ ಎಂಬವರ ಕ್ವಾರೆಯಲ್ಲಿ ಅಕ್ರಮ ಸ್ಪೋಟಕಗಳನ್ನು ದಾಸ್ತಾನು ಇರಿಸಿರುವ ಕುರಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ರೈಟರ್ ಆದರ್ಶ ಶೆಟ್ಟಿ, ಚಾಲಕರಾದ ಸುರೇಶ್ ಮತ್ತು ರತ್ನಾಕರ ಎಂಬವರನ್ನು ಬಂಧಿಸಿದ್ದಾರೆ.

ಕ್ವಾರೆಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 32 ಜಿಲೆಟಿನ್ ಕಡ್ಡಿಗಳು, ಎರಡು ಲಾರಿ, ನಾಲ್ಕು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೋಟ ಪೊಲೀಸ್ ಠಾಣಾಧಿಕಾರಿ ರಫೀಕ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ರೀತಿ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಗುಮ್ಮಲ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೆಂಪು ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಕೃಷ್ಣ ನಾಯ್ಕ, ವಾಸು ನಾಯ್ಕ, ಸುರೇಶ್, ರವೀಂದ್ರ, ಕೃಷ್ಣ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ 407 ಟೆಂಪೊ, ಕಟ್ಟಿಂಗ್ ಮೆಶಿನ್ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ಠಾಣಾಧಿಕಾರಿ ಪ್ರಕಾಶ್ ಕೆ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News