ಉಡುಪಿ ಆರ್‌ಟಿಒ ಮಂಗಳೂರಿನ ಮನೆಗೆ ದಾಳಿ: 70 ಲಕ್ಷ ರೂ. ಸಹಿತ ಕೋಟ್ಯಂತರ ಮೌಲ್ಯದ ದಾಖಲೆ ವಶ

Update: 2019-03-18 16:28 GMT
ಆರ್.ಎಂ.ವರ್ಣೇಕರ್

ಉಡುಪಿ, ಮಾ.18: ಬೆಂಗಳೂರು ಏರ್ ಶೋ ಸಂದರ್ಭದಲ್ಲಿ ಬೆಂಕಿ ಅವಘಡದಿಂದ ಸುಟ್ಟು ಹೋದ ಕಾರೊಂದರ ರಸ್ತೆ ತೆರಿಗೆ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಾ.16ರಂದು ಬಂಧನಕ್ಕೆ ಒಳಗಾದ ಉಡುಪಿ ಆರ್‌ಟಿಒ ಆರ್.ಎಂ.ವರ್ಣೇಕರ್ ಅವರ ಮಂಗಳೂರಿನ ಮನೆಯ ಮೇಲೂ ಅದೇ ದಿನ ರಾತ್ರಿ ದಾಳಿ ನಡೆಸಿದ ಎಸಿಬಿ ಪೊಲೀಸರು, 70 ಲಕ್ಷ ರೂ. ಅಕ್ರಮ ನಗದು ಸಹಿತ ಕೋಟ್ಯಂತರ ರೂ. ಮೌಲ್ಯದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಕಳದ ವಿಘ್ನೇಶ್ ನೀಡಿದ ದೂರಿನಂತೆ ಉಡುಪಿ ಎಸಿಬಿ ಪೊಲೀಸರು ಆರ್‌ಟಿಒ ಕಚೇರಿಗೆ ದಾಳಿ ನಡೆಸಿ ಆರ್‌ಟಿಒ ಹಾಗೂ ಮಧ್ಯವರ್ತಿ ಮುನಾಫ್ ಎಂಬಾತನನ್ನು ಬಂಧಿಸಿ, ಲಂಚದ ಹಣ 4 ಸಾವಿರ ರೂ. ಮತ್ತು ಕಚೇರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 30,670 ರೂ.ವನ್ನು ವಶಪಡಿಸಿಕೊಂಡಿದ್ದರು. ಬಳಿಕ ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನಂತರ ತನಿಖೆಯನ್ನು ಮುಂದುವರೆಸಿದ ಎಸಿಬಿ ಪೊಲೀಸರು, ಅದೇ ದಿನ ರಾತ್ರಿ ಖಚಿತ ಮಾಹಿತಿಯಂತೆ ವರ್ಣೆಕರ್‌ನ ಮಂಗಳೂರಿನಲ್ಲಿರುವ ಬಿಜೈನಲ್ಲಿ ರುವ ವಾಸ್ತವ್ಯದ ಮನೆಗೆ ದಾಳಿ ನಡೆಸಿದರು. ಮನೆಯಲ್ಲಿ ಶೋಧನೆ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 70,18,237 ನಗದು, ಮನೆ, ಫ್ಲಾಟ್, ಜಮೀನು, ಇತರ ಉಳಿತಾಯ ಖಾತೆ ಮತ್ತು ಹಲವಾರು ಮೌಲ್ಯಯುತವಾದ ದಾಖಲೆ ಪತ್ರಗಳು, ವಾಹನಗಳು ಸೇರಿ ಕೋಟ್ಯಂತರ ರೂ. ಮೌಲ್ಯದ ದಾಖಲೆಗಳು ಮತ್ತು ಬ್ಯಾಂಕ್ ಲಾಕರ್‌ನ ಎರಡು ಕೀಗಳು ಪತ್ತೆಯಾಗಿದ್ದವು. ಅವುಗಳನ್ನು ವಶಪಡಿಸಿಕೊಂಡಿರುವ ಎಸಿಬಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಇಬ್ಬರು ಆರೋಪಿಗಳಿಗೂ ಜಾಮೀನು

ಮಾ.16ರ ರಾತ್ರಿಯಿಂದ ಮಾ.18ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಉಡುಪಿ ಆರ್‌ಟಿಒ ಆರ್.ಎಂ. ವರ್ಣೇಕರ್ (56) ಮತ್ತು ಮಧ್ಯವರ್ತಿ ಮುನಾಫ್ (35) ಎಂಬವರನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರಿಗೂ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News