ಭಟ್ಕಳ: ಐಸಿಐಸಿಐ ಬ್ಯಾಂಕ್ ಖಾತೆಗಳಿಂದ 3 ಲಕ್ಷ ಕ್ಕೂ ಅಧಿಕ ಹಣ ವಂಚನೆ; ಆರೋಪ

Update: 2019-03-18 17:06 GMT

ಭಟ್ಕಳ: ಇಲ್ಲಿನ ಐಸಿಐಸಿಐ ಬ್ಯಾಂಕ್ ಶಾಖೆಯ 5 ಮಂದಿ ಗ್ರಾಹಕರ ಖಾತೆಯಿಂದ ಸುಮಾರು 3ಲಕ್ಷ ಕ್ಕೂ ಅಧಿಕ ಹಣವನ್ನು ಅಪರಿಚಿತ ವ್ಯಕ್ತಿಗಳು ಡ್ರಾ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ವಂಚನೆಗೊಳಗಾದ ಗ್ರಾಹಕರು ಆತಂಕಿತರಾಗಿದ್ದಾರೆ.

ಈ ಕುರಿತು ಕೇವಲ 10ನಿಮಿಷದಲ್ಲೇ 60 ಸಾವಿರ ಹಣವನ್ನು ತನ್ನ ಖಾತೆಯಿಂದ ಅಪರಿಚಿತರು ವಂಚಿಸಿದ್ದಾರೆ ಎಂದು ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಚಿಸದ ವಂಚನೆಗೆ ಒಳಗಾದ ಗ್ರಾಹಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದು ತನ್ನ ತಾನು ಅಂಗಡಿಯೊಂದರಲ್ಲಿ ಕುಳಿತುಕೊಂಡಾಗ ತನ್ನ ಮೊಬೈಲ್ ಸಂಖ್ಯೆಗೆ ಐಸಿಐಸಿಐ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಡ್ರಾ ಮಾಡಿಕೊಂಡಿದ್ದಾಗಿ ಸಂದೇಶವೊಂದು ಬಂದಿದ್ದು, ದಿಗಿಲುಗೊಂಡು ಬ್ಯಾಂಕಿಗೆ ಹೋಗುವ 10 ನಿಮಿಷದೊಳಗೆ 60 ಸಾವಿರ ರೂ. ಡ್ರಾ ಆಗಿರುವ ಕುರಿತು ಮೊಬೈಲ್ ಸಂದೇಶ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸ್ ಠಾಣೆಗೆ ದೂರನ್ನು ನೀಡಲು ಹೋದಾಗ ಯಾರ ವಿರುದ್ಧ ದೂರು ದಾಖಲಿಸಬೇಕು ಎಂಬ ಗೊಂದಲ ಉಂಟಾಗಿದ್ದು ಪೊಲೀಸರು ತನಿಖೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಂತರ ಐಸಿಐಸಿಐ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಲ್ಲಿ ವಿಚಾರಿಸಲಾಗಿ ಆಂಧ್ರ ಪ್ರದೇಶದ ಯಾವುದೋ ಹಳ್ಳಿಯಿಂದ ಈ ಹಣ ಡ್ರಾ ಆಗಿರುವ ಕುರಿತಂತೆ ಮಾಹಿತಿ ದೊರಕಿದೆ.

ಆಕ್ರೋಶಗೊಂಡ ವಂಚನೆಗೊಳಗಾದವರು ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕರಿಗೆ ತರಾಟೆಗೆ ತೆಗೆದುಕೊಂಡಿದ್ದು, ತಮ್ಮ ಹಣ ಖಾತೆಗೆ ಜಮಾ ಆಗದಿದ್ದಲ್ಲಿ ಬ್ಯಾಂಕ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐ.ಸಿ.ಐ.ಸಿ.ಐ ಬ್ಯಾಂಕ್ ಭಟ್ಕಳ ಶಾಖಾ ವ್ಯವಸ್ಥಾಪಕರನ್ನು ವಿಚಾರಿಸಿದರೆ ಯಾವುದೇ ಸೂಕ್ತ ಉತ್ತರ ನೀಡದೆ ನಮ್ಮ ಮೇಲಾಧಿಕಾರಿಗಳು ಈ ಕುರಿತ ತನಿಖೆ ಕೈಗೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News