ಸೈನಿಕರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ: ದೂರು ದಾಖಲು

Update: 2019-03-18 17:17 GMT

ಭಟ್ಕಳ:  ಇಲ್ಲಿನ ಮುರ್ಡೇಶ್ವರ ಮಾವಳ್ಳಿ-1 ಪಂಚಾಯತ್ ವ್ಯಾಪ್ತಿಯ ಹಿರೇದೋಮಿಯಲ್ಲಿ ರವಿವಾರ ಸೈನಿಕರ ತಂದೆ-ತಾಯಿ ಮೇಲೆ ಪಕ್ಕದ ಮನೆಯವರು ಮಾರಣಾಂತಿಕ ಹಲ್ಲೆ ನಡೆಸಿ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ ಕುರಿತಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದವರನ್ನು ಮುರ್ಡೇಶ್ವರ ಹೀರೆದೋಮಿಯ ಮಂಜುನಾಥ ಶನಿಯಾರ ನಾಯ್ಕ, ಯಮುನಾ ಮಂಜುನಾಥ ನಾಯ್ಕ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಿಗಳು ಹಿರೆದೋಮಿಯ ಶ್ರೀಧರ ತಿಮ್ಮಪ್ಪ ಮೊಗೇರ, ತಿಮ್ಮಪ್ಪ ನಾರಾಯಣ ಮೊಗೇರ, ಮಾದೇವಿ ತಿಮ್ಮಪ್ಪ ಮೊಗೇರ, ನೇತ್ರಾ ಉಮೇಶ ಮೊಗೇರ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆ ನಡೆಸಿದವರು ಪಕ್ಕದ ಮನೆಯವರಾಗಿದ್ದು ಪಂಚಾಯತ್ ನಿಂದ ಕುಡಿಯುವ ನೀರಿನ ಪೈಪ್ ನ ವಿಚಾರವಾಗಿ ಹಾಗೂ ದನ ತಿರುಗಾಡುವ ದಾರಿ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಮಂಜುನಾಥರ ಹಿರಿಯ ಪುತ್ರ ಹರೀಶ ಮಂಜುನಾಥ ನಾಯ್ಕ ಗುಜರಾತಿನಲ್ಲಿ ಭಾರತೀಯ ಭೂಸೇನೆಯಲ್ಲಿ ಕಮಾಂಡೊ ಆಗಿದ್ದರೆ, ಇನ್ನೋರ್ವ ಪುತ್ರ ನಂದೀಶ ಮಂಜುನಾಥ ನಾಯ್ಕ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭೂ ಸೇನೆಯಲ್ಲಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೈನಿಕರ ತಂದೆ ಮಂಜುನಾಥ ಶನಿಯಾರ ನಾಯ್ಕ 'ನಮ್ಮಿಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೆಟ್ಟ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದಾರೆ. ಮಕ್ಕಳಿಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪಾಲಕರಾದ ನಮಗೆ ಯಾವುದೇ ರಕ್ಷಣೆಯಿಲ್ಲವಾಗಿದೆ. ಮನೆಯಲ್ಲಿ ನಾವಿಬ್ಬರೇ ವಾಸವಾಗಿದ್ದು, ನಮಗೆ ರಕ್ಷಣೆ ಬೇಕಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News