ಮಾ.20ರಂದು ನಿಟ್ಟೆ ಕ್ಯಾಂಪಸ್‌ನಿಂದ ಬಾನುಲಿ ನೇರಪ್ರಸಾರ

Update: 2019-03-18 17:28 GMT

ಮಂಗಳೂರು, ಮಾ.18: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ ಶೇಕಡಾವಾರು ಮತದಾನ ಹೆಚ್ಚಿಸಲು ಮಂಗಳೂರು ಆಕಾಶವಾಣಿಯು ಮಾ. 20ರಂದು ಬೆಳಗ್ಗೆ 9:15ಕ್ಕೆ ದೇರಳಕಟ್ಟೆಯ ನಿಟ್ಟೆ ಕ್ಯಾಂಪಸ್ ಸಭಾಂಗಣದಿಂದ ‘ಯುವ ಮತದಾರರ ಜಾಗೃತಿ ಅಭಿಯಾನ’ ವಿಶೇಷ ಕಾರ್ಯಕ್ರಮವನ್ನು ಮಂಗಳೂರು ಆಕಾಶವಾಣಿ ನೇರಪ್ರಸಾರ ಮಾಡಲಿದೆ.

ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಸಹಭಾಗಿತ್ವದ ಈ ವಿಶೇಷ ಕಾರ್ಯಕ್ರಮವನ್ನು ದ.ಕ. ಜಿಲ್ಲಾಧಿಕಾರಿ ಹಾಗೂ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ, ಕುಲಪತಿ ಡಾ.ಸತೀಶ್‌ಕುಮಾರ್ ಭಂಡಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಮತ್ತು ಜಿಪಂ ಸಿಇಒ ಡಾ.ಸೆಲ್ವಮಣಿ ಆರ್., ಸಹಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಕಾರ್ಯಕ್ರಮ ಸಂಯೋಜಕ ನಿಟ್ಟೆ ವಿ.ವಿ.ಯ ಮಾನವೀಕ ವಿಭಾಗದ ಮುಖ್ಯಸ್ಥರಾದ ಡಾ.ಸಾಯಿಗೀತಾ, ಹರ್ಷ ಹಾಲಹಳ್ಳಿ, ಡಾ.ಅನಿರ್ಬನ್ ಚಕ್ರವರ್ತಿ, ಡಾ.ಸತೀಶ್‌ರಾವ್‌ಪಾಲ್ಗೊಳ್ಳುವರು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯುವ ಮತದಾರರನ್ನು ಪ್ರತಿನಿಧಿಸಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಯುವ ಮತದಾರರ ಮನದಾಳದ ಆಶಯ ಹಂಚಿಕೊಳ್ಳಲಿದ್ದು, ಲೋಕಸಭಾ ಚುನಾವಣೆಯ ಈ ಬಾರಿಯ ವೈಶಿಷ್ಟತೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿರುವರು. ದೂರದರ್ಶನ ಪ್ರತಿನಿಧಿಗಳಾದ ರಮೇಶ್ ಪೆರ್ಲ, ರಾಜೇಶ್ ದಡ್ಡಂಗಡಿ, ಆಕಾಶವಾಣಿಯ ಡಾ.ಶರಬೇಂದ್ರ ಸ್ವಾಮಿ, ದೇವು ಹನೇಹಳ್ಳಿ, ಡಾ.ಸದಾನಂದ ಪೆರ್ಲ, ಮನೋಹರ್ ಕದ್ರಿ ಮತ್ತಿತರರು ಭಾಗವಹಿಸಲಿರುವರು ಎಂದು ಆಕಾಶವಾಣಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News