ಬಜೆಟಿನಲ್ಲಿ ಅಸ್ತು ನೀಡಿರುವುದು ರಾಜ್ಯದ ಸಮ್ಮಿಶ್ರ ಸರಕಾರ: ಜೆಡಿಎಸ್

Update: 2019-03-18 17:44 GMT

ಉಳ್ಳಾಲ: ರಾಜ್ಯದ ಮುಖ್ಯಮಂತ್ರಿ ಜಿಲ್ಲೆಯ ಮಹತ್ವದ ಯೋಜನೆಯಾಗಿರುವ ಮಣಿಪಾಲದಿಂದ ಕೊಣಾಜೆಗೆ ಶೈಕ್ಷಣಿಕ ಕಾರಿಡಾರ್ ನಿರ್ಮಾಣಕ್ಕೆ ಬಜೆಟಿನಲ್ಲಿ ಅಸ್ತು ನೀಡಿರುವುದು ದೊಡ್ಡ ಸಾಧನೆ. ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರ  ಅಭಿವೃದ್ಧಿಪರ ಕಾರ್ಯಸಾಧನೆಗಳಲ್ಲಿ ಮುಂಚೂಣಿ ಯಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ  ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ  ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಹೇಳಿದರು.

ತೊಕ್ಕೊಟ್ಟುವಿನಲ್ಲಿ ಸೋಮವಾರ  ಜಾತ್ಯಾತೀತ ಜನತಾದಳ ಮಂಗಳೂರು ವಿಧಾನಸಭಾ  ಕ್ಷೇತ್ರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ  ಮಣಿಪಾಲದಲ್ಲಿ  ಉನ್ನತ ವ್ಯಾಸಾಂಗದ ಕಾಲೇಜುಗಳಿಂದ  ಮಂಗಳೂರು ವಿಶ್ವವಿದ್ಯಾನಿಲಯದವರೆಗೆ ಸಂಪರ್ಕ ಕಲ್ಪಿಸುವ ಮೂಲಕ  ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದರು. 

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಎಂಟು ತಿಂಗಳಲ್ಲಿ ನಡೆಸಿರುವ ಕಾರ್ಯಸಾಧನೆಗಳಿಂದ ರಾಜ್ಯದ ಪ್ರತಿ ಲೋಕಸಭಾ ಸ್ಥಾನಗಳಲ್ಲಿ ಸಮ್ಮಿಶ್ರ ಬೆಂಬಲಿತ ಅಭ್ಯರ್ಥಿಗಳು  ಜಯಭೇರಿ ಸಾಧಿಸಲಿದ್ದಾರೆ. ಸಾಮರಸ್ಯ, ಸೌಹಾರ್ದ ಸೃಷ್ಟಿಸುವ  ಅನುಭವವುಳ್ಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಕೇಂದ್ರ ಸರಕಾರದ ನೀತಿಗಳಿಂದ ಅತೀ ಹೆಚ್ಚು ಸಾಲಗಾರರು ದೇಶದಲ್ಲಿದ್ದಾರೆ. ಸಿಬಿಐ ಒಡೆದ ಮನೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ಪ್ರತಿನಿಧಿಗಳು ಮಾಧ್ಯಮಗಳ ಮುಂದೆ ಬರುವಂತಾಗಿದೆ.  ಈ ಮೂಲಕ ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ಸ್ಪಷ್ಟವಾಗಿದೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಕದಡಲು ಮಂಗಳೂರು ಕ್ಷೇತ್ರದಲ್ಲಿಯೇ ಸಂಸದರು ನಡೆಸಿರುವ ಭಾಷಣದ ಮೂಲಕ ಪ್ರಯತ್ನಿಸಿರುವುದು ಖೇದಕರ.  ಭಾವನಾತ್ಮಕ ವಿಚಾರಗಳನ್ನೇ  ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಮತಯಾಚಿಸುವ ಸಂಸದರಿಗೆ ಮೇಲ್ಸೇತುವೆ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.  ಜಿಲ್ಲೆಯ ಜನ ಇಂತಹ ಸಂಸದರನ್ನು ಮತ್ತೆ ಕಳಿಸುವ ಮೂರ್ಖತನ ಮಾಡುವುದಿಲ್ಲ ಎಂಬ ಧೈರ್ಯವಿದೆ. ಉಳ್ಳಾಲದ ಜನರ ಬೇಡಿಕೆಯಿಲ್ಲದಿದ್ದರೂ,  ತಾಲೂಕು ಘೋಷಣೆ ಮಾಡುವ ಮೂಲಕ ರೈತರಿಗೆ, ಜನಸಾಮಾನ್ಯರಿಗೆ  ಮಂಗಳೂರು ಸರಕಾರಿ  ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ ಎಂದರು.

'ಅಯೋಧ್ಯೆಯಲ್ಲಿ ದೇವಸ್ಥಾನ ಕಟ್ಟಬೇಡಿ ಎಂದು ಮುಸ್ಲಿಂ ಸಮಾಜ ಎಂದಿಗೂ ಹೇಳುವುದಿಲ್ಲ'

ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಮಾತನಾಡಿ ರಾಜ್ಯದ ಸಮ್ಮಿಶ್ರ ಸರಕಾರದ ಎಂಟು  ತಿಂಗಳ ಸಾಧನೆಯಿಂದ   ಮತದಾರರಲ್ಲಿ ಮುಚ್ಚುಮರೆಯಿಲ್ಲದೆ ಮತಯಾಚನೆ ನಡೆಸಬಹುದು. ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವುದರ ಜೊತೆಗೆ ಹೆಚ್ಚಿನ ಅನುದಾನ ಒದಗಿಸುವುದರ ಮೂಲಕ  ಮುಖ್ಯಮಂತ್ರಿ ಜನಪರವಾಗಿದ್ದಾರೆ ಅನ್ನುವುದು ಸಾಬೀತಾಗಿದೆ. ಜಿಲ್ಲೆಯಲ್ಲಿ ಕಡಬ, ಮೂಡಬಿದ್ರೆ, ಮುಲ್ಕಿ , ಉಳ್ಳಾಲ ಪ್ರದೇಶಗಳನ್ನು ತಾಲೂಕು ರಚನೆ ಘೋಷಿಸುವ ಮುಖೇನ ಜಿಲ್ಲೆಯ ಅಭಿವೃದ್ಧಿಯಲ್ಲಿ  ಪರಿಣಾಮ ಬೀರಿದ್ದಾರೆ. ಜಿಲ್ಲೆಯ ಸಂಸದರು 10 ವರ್ಷಗಳ ಅವಧಿಯಲ್ಲಿ ಜಾತಿ ವಿಷಬೀಜ ಬಿತ್ತುವ ಮೂಲಕ ಯುವಕರ ನೆಮ್ಮದಿಯಾಗಿ ಮನೆಗಳಿಗೆ ಹೋಗದಂತಹ ವಾತಾವರಣ ನಿರ್ಮಿಸಿದ್ದರು.  ಕೋಮುದ್ವೇಷ  ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಯನ್ನೇ ಹುಟ್ಟುಹಾಕುತ್ತಾ ಬಂದಿದ್ದಾರೆ. ದೇಶದಲ್ಲಿಯೂ ಜಿಲ್ಲೆಯ ಸಂಸದರಿಗೆ ಬೆಲೆಯೇ ಇಲ್ಲದಂತಾಗಿದೆ.  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಮತಯಾಚಿಸುತ್ತಾ ಗೆದ್ದರೂ, ಈವರೆಗೂ ಮಂದಿರ ನಿರ್ಮಿಸಲು ಅಸಾಧ್ಯವಾಗಿದೆ. ಅಯೋಧ್ಯೆಯಲ್ಲಿ  ಶ್ರೀ ರಾಮ ದೇವಸ್ಥಾನ ನಿರ್ಮಿಸದೆ, ದೇಶದ ಪ್ರಧಾನಿ ದುಬೈ, ಅಬುಧಾಬಿಯಲ್ಲಿ ದೇವಸ್ಥಾನಗಳನ್ನು ಕಟ್ಟುತ್ತಿದ್ದಾರೆ. ಮುಸ್ಲಿಂ ಸಮಾಜ ಎಂದಿಗೂ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಡಿ ಎಂದು  ಹೇಳಲಿಲ್ಲ ಎಂದರು.

ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ , ಮುಖಂಡರುಗಳಾದ  ಅಬೂಬಕರ್ ನಾಟೆಕಲ್,  ನಝೀರ್ ಉಳ್ಳಾಲ್ , ಹೈದರ್ ಪರ್ತಿಪ್ಪಾಡಿ, ಯು.ಹೆಚ್ ಫಾರುಕ್, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News