ಜೆಡಿಎಸ್ ಪಕ್ಷಕ್ಕೆ ವಿದ್ಯಾವಂತ ಜನರು ಮತ ಹಾಕಲ್ಲ: ಕೋಟ ಶ್ರೀನಿವಾಸ ಪೂಜಾರಿ

Update: 2019-03-19 11:57 GMT

ಉಡುಪಿ, ಮಾ.19: ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಎಂದೂ ಬೆಲೆ ನೀಡಲ್ಲ. ಜೆಡಿಎಸ್ ಪಕ್ಷಕ್ಕೆ ವಿದ್ಯಾವಂತ ಜನರು ಮತ ಹಾಕಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್‌ಗೆ ತಕ್ಕಪಾಠ ಕಲಿಸಲಿದ್ದಾರೆ. ಕುಮಾರ ಸ್ವಾಮಿ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಹುದ್ದೆಯ ಘನತೆಗೆ ತಕ್ಕುದಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಕಳೆದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಗಳಿಗೆ ಅನ್ಯಾಯ ಮಾಡಿರುವ ಕುಮಾರ ಸ್ವಾಮಿ, ಕರಾವಳಿಗೆ ಅವರ ಕೊಡುಗೆ ಏನು ಎಂಬುದನ್ನು ಮೊದಲು ಹೇಳಲಿ. ಉಡುಪಿ ಜನ ನಿಮ್ಮ ಮುಂದೆ ತಿರುಗಿ ಬಿದ್ದಿದ್ದಾರೆ. ಜೆಡಿಎಸ್‌ಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಅವರು ಕರಾವಳಿಯ ಜನರ ಅವಹೇಳನ ಮಾಡುತ್ತಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ಈ ಕುರಿತು ಹೇಳಿಕೆಯನ್ನು ಕೂಡಲೇ ವಾಪಾಸು ಪಡೆದು ಕ್ಷಮೆ ಕೇಳಬೇಕು. ಕುಮಾರಸ್ವಾಮಿ ಕರಾವಳಿಯನ್ನು ಉದ್ದಾರ ಮಾಡಿಲ್ಲ. ಯಾವ ಮುಖ್ಯಮಂತ್ರಿಗಳು ಕೂಡ ಕುಮಾರಸ್ವಾಮಿಯಷ್ಟು ಕರಾವಳಿಯನ್ನು ಅವಹೇಳನ ಮಾಡಿಲ್ಲ. ಕರಾವಳಿಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ ಎಂದು ಅವರು ಆರೋಪಿಸಿದರು.

ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು ಕೊಟ್ಟಿದ್ದಾರೆ. ಬಂದರು ಅಭಿವೃದ್ಧಿಗೆ ಮುಖ್ಯಮಂತ್ರಿ ಎಷ್ಟು ಅನುದಾರ ನೀಡಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಲೋಕ್‌ಪಾಲ್ ಮಸೂದೆ

ಲೋಕ್‌ಪಾಲ್ ಮಸೂದೆ ಭಾರತ ದೇಶದ ಜನರ ಕನಸು. ಅಣ್ಣಾ ಹಜಾರೆ ಧರಣಿ ಕುಳಿತು ದೊಡ್ಡ ಹೋರಾಟ ಮಾಡಿದ್ದರು. ಆ ಮಸೂದೆ ಸಂಬಂಧ ಕಳೆದ 5 ವರ್ಷಗಳಲ್ಲಿ ಏಳು ಬಾರಿ ಸಭೆ ಕರೆಯಲಾಗಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕ ಅಲ್ಲದಿದ್ದರೂ ಕಾಂಗ್ರೆಸ್ ಸಂಸದೀಯ ನಾಯಕನ ನೆಲೆಯಲ್ಲಿ ಸಭೆಗೆ ಮೋದಿ ಆಹ್ವಾನ ನೀಡಿದ್ದರು ಎಂದು ಅವರು ತಿಳಿಸಿದರು.

ಆದರೆ ಖರ್ಗೆ ಲೋಕಪಾಲ್ ಬಿಲ್ ಪರವೋ ವಿರುದ್ಧವೋ ಎಂಬುದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಅವರು ಏಳು ಬಾರಿಯೂ ಸಭೆಯನ್ನು ನಿರ್ಲಕ್ಷ ಮಾಡಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಗಿಸಿದ ಇವರು, ದೇಶದಲ್ಲಿ ಲೋಕಪಾಲ್ ಮುಗಿಸುವ ಆಲೋಚನೆಯಲ್ಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News