ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸಿ ಆಮೇಲೆ ಮತ ಕೇಳಿ: ಬಿ.ಎಂ. ಭಟ್

Update: 2019-03-19 12:52 GMT

ಪುತ್ತೂರು: ಬಿಸಿಯೂಟ ನೌಕರರಾಗಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರ ಬಗ್ಗೆ ಅಧಿಕಾರದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳು ಕಿಂಚಿತ್ತು ಕಾಳಜಿ, ಅನುಕಂಪ ತೋರಿಸುತ್ತಿಲ್ಲ. ಇಂತಹ ಪಕ್ಷಗಳಿಗೆ ಬಿಸಿಯೂಟ ನೌಕರರು ಎಂದಿಗೂ ಮತ ಚಲಾವಣೆ ಮಾಡುವುದಿಲ್ಲ. ಮೊದಲು ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸಿ ಆಮೇಲೆ ನಮ್ಮ ಬಳಿಗೆ ಮತ ಕೇಳಲು ಬನ್ನಿ ಎಂದು ಅಕ್ಷರ ದಾಸೋಹ ನೌಕರರ ಸಂಘದ ಕಾನೂನು ಸಲಹೆಗಾರರಾದ ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ. ಭಟ್ ಆಗ್ರಹಿಸಿದರು.

ಅವರು ಮಂಗಳವಾರ ಪುತ್ತೂರು ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಇಲ್ಲಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ಕಳೆದ 5 ವರ್ಷಗಳಲ್ಲಿ ಬಿಸಿಯೂಟ ನೌಕರರಿಗೆ ಯಾವುದೇ ವೇತನ ಹೆಚ್ಚಳ ಮಾಡದೆ ಅನಾದಾರಣೆ ತೋರಿದೆ. ರಾಜ್ಯ ಸರ್ಕಾರ 2 ಬಾರಿ ರೂ. 500 ಹೆಚ್ಚಳ ಮಾಡಿ ಕೈತೊಳೆದುಕೊಂಡಿದೆ. ನೌಕರರಿಗೆ ಮಾಸಿಕ ರೂ.2500 ನೀಡುವ ಮೂಲಕ ಜೀತದಾಳುಗಳನ್ನು ಸೃಷ್ಟಿಸುವ ಕೆಲಸ ಮಾಡಿದೆ. ಗ್ಯಾಸ್, ಆಹಾರ ವಸ್ತು, ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಬಿಸಿಯೂಟ ನೌಕರರು ಮಾತ್ರ ಇದೇ ಸಂಬಳದಲ್ಲಿ ಬದುಕು ಸಾಗಿಸ ಬೇಕಾಗಿದೆ. ಇಂತಹ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದರು. 

ಈ ಬಾರಿಯ ಪ್ರಣಾಳಿಕೆಯಲ್ಲಿ ಬಿಸಿಯೂಟ ನೌಕರರ ವೇತನ ಹೆಚ್ಚಳ ಮಾಡುವ ಭರವಸೆ ನೀಡುವ ಪಕ್ಷಗಳಿಗೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು. 

ಪ್ರತಿಭಟನಾ ಸಭೆಯ ಬಳಿಕ ಬೇಡಿಕೆಗಳ ಮನವಿಯನ್ನು ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ರತ್ನ, ಕಾರ್ಯದರ್ಶಿ ಸವಿತ, ಮುಖಂಡರಾದ ವೇದಾ, ಜಯಂತಿ, ದೇವಕಿ, ಕೇಶವ ಗೌಡ, ನಬಿಸ, ಪುಷ್ಪ, ಜಯಶ್ರೀ ಮತ್ತಿತರರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News