ಬಿಜೆಪಿ ಬಾಗಿಲಿಂದ ಜೆಡಿಎಸ್ ಪಡಸಾಲೆಗೆ ಪ್ರಮೋದ್ !

Update: 2019-03-19 14:34 GMT

ಉಡುಪಿ, ಮಾ.19: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಪ್ರಮೋದ್ ಮಧ್ವರಾಜ್‌ರ ಈ ಗೊಂದಲಮಯ ನಡೆಗೆ ಕಾರ್ಯಕರ್ತರು ಹಾಗೂ ನಾಯಕರುಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ರಘುಪತಿ ಭಟ್ ವಿರುದ್ಧ 11 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡ ಪ್ರಮೋದ್ ಮಧ್ವರಾಜ್, ಮತ್ತೆ  ಇನ್ನೊಂದು ಪಕ್ಷದ ಮೂಲಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವುದು ಪಕ್ಷದ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ಸೇರ್ಪಡೆ ಕುರಿತಂತೆ ಅವರು ನೀಡುತಿದ್ದ ಗೊಂದಲಮಯ, ವಿವಾದಾತ್ಮಕ ಹೇಳಿಕೆ ಪಕ್ಷಕ್ಕೆ ಹಾಗೂ ಸ್ವತಹ ಅವರಿಗೇ ಸಾಕಷ್ಟು ನಷ್ಟವನ್ನುಂಟು ಮಾಡಿದ್ದರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ಗಾಗಿ ಎದುರು ನೋಡುತ್ತಿರುವ ಪ್ರಮೋದ್ ಅವರ ಪಕ್ಷನಿಷ್ಠೆ ಹಾಗೂ ರಾಜಕೀಯ ಒಲವು, ನಿಲುವುಗಳು ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ.

‘ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಇನ್ನೊಂದು ಪಕ್ಷದಲ್ಲಿ ಸ್ಪರ್ಧಿಸಿದರೆ ಅದಕ್ಕೆ ನಮ್ಮ ಸಹಮತ ಇಲ್ಲ. ಈ ವಿಚಾರದಲ್ಲಿ ಪ್ರಮೋದ್ ಮಧ್ವರಾಜ್ ನಮ್ಮ ಬಳಿ ಯಾವುದೇ ಅಭಿಪ್ರಾಯ ಕೇಳಿಲ್ಲ. ಅವರು ನಮ್ಮ ಬಳಿ ಕೇಳುವಷ್ಟು ದೊಡ್ಡ ಜನ ನಾವು ಅಲ್ಲದೆ ಇರಬಹುದು. ಆದರೆ ನಮಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದಲ್ಲಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಈ ಬಗ್ಗೆ ಹೈಕಮಾಂಡ್‌ಗೆ ಒತ್ತಡ ಹಾಕುವ ಕೆಲಸ ನಡೆಯುತ್ತಿದೆ. ಪಕ್ಷ ಬಿಟ್ಟು ಹೋಗುವವರಿಗೆ ನಾವೇನೂ ಮಾಡಲು ಆಗಲ್ಲ. ಕಾಂಗ್ರೆಸ್ ಪಕ್ಷ ವಿಶಾಲವಾಗಿದೆ. ಯಾರು ಕೂಡ ಹೊರಗೆ ಹೋದರೂ ಪಕ್ಷ ಎಂದಿಗೂ ಬಡವಾಗುವುದಿಲ್ಲ’ ಎಂದು ಜಿಲ್ಲಾ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಪ್ರತಿಕ್ರಿಯಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಅನ್ಸಾರ್ ಅಹ್ಮದ್ ಹೇಳಿಕೆ ನೀಡಿ, ‘ಕಾಂಗ್ರೆಸ್ ಪಕ್ಷ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರವನ್ನು ತರಿಸಿದೆ. ಈ ಮಧ್ಯೆ, ಕೇವಲ ಐದು ತಿಂಗಳ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಪ್ರಮೋದ್ ಮಧ್ವರಾಜ್ ರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು ಮೂರ್ಖತನದ ಪರಮಾವಧಿಯೇ ಸರಿ’ ಎಂದು ಟೀಕಿಸಿದ್ದಾರೆ.

‘ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದು ಬಹಳ ನೋವಿನ ಸಂಗತಿ. ಈ ಮಧ್ಯೆ ಪ್ರಮೋದ್ ಮಧ್ವರಾಜ್ ಜೆಡಿಎಸ್‌ನಲ್ಲಿ ಸ್ಪರ್ಧಿ ಸುತ್ತಿರುವ ಸುದ್ದಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಿದೆ. ಜಿಲ್ಲೆಯಲ್ಲಿ ಜನಮನ್ನಣೆ ಇಲ್ಲದ ಪಕ್ಷದಲ್ಲಿ ನಿಂತರೆ ಕಾರ್ಯಕರ್ತರ ಬೆಂಬಲ ದೊರೆಯುವುದು ಕಷ್ಟ. ಇದರಿಂದ ಇವರ ಬೆಂಬಲಿಗರು ಬಿಜೆಪಿಗೆ ಮತ ಹಾಕುವ ಸಾಧ್ಯತೆಗಳನ್ನು ಕೂಡ ಅಲ್ಲಗಳೆಯುವಂತಿಲ್ಲ. ಪ್ರಮೋದ್ ಈ ರೀತಿ ಮಾಡಿದರೆ ಎರಡು ದೋಣಿ ಯಲ್ಲಿ ಕಾಲಿರಿಸಿದಂತಾಗುತ್ತದೆ. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಹರಕೆಯ ಕುರಿಯಾಗಲಿದ್ದಾರೆ. ಇವರು ಅರ್ಧದಲ್ಲಿ ಕೈಬಿಡುತ್ತಾರೆಯೇ ಎಂಬ ಭೀತಿ ಕೂಡ ಕಾರ್ಯಕರ್ತರಿಗೆ ಆವರಿಸಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತ ಗಣೇಶ್‌ ರಾಜ್ ಸರಳೆಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ತೊರೆಯಲು ಸಿದ್ಧತೆಯೇ ?

ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಮೋದ್ ಮಧ್ವರಾಜ್ ನೀಡಿರುವ ಹೇಳಿಕೆ ಇದೀಗ ಕಾಂಗ್ರೆಸ್ ಪಕ್ಷದೊಳಗೆ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಈವರೆಗಿನ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೀಡಿರುವ ಕಾಂಗ್ರೆಸ್ ಪಕ್ಷ, ಅವರಿಗೀಗ ಅಪಥ್ಯವಾಗಿದೆಯೇ ಎಂದು ಸಾಮಾನ್ಯ ಕಾರ್ಯಕರ್ತರೂ  ಬಹಿರಂಗವಾಗಿ ಚರ್ಚಿಸತೊಡಗಿದ್ದಾರೆ.

ಲೋಕಸಭಾ ಚುನಾವಣೆ ನಡೆಯುವುದು ಪಕ್ಷಾಧಾರಿತವಾಗಿ. ಹೀಗಾಗಿ ಇಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಎಂಬ ಪರಿಕಲ್ಪನೆಗೆ ಅವಕಾಶವಿಲ್ಲ. ಒಂದೋ ಅವರು ಕಾಂಗ್ರೆಸ್‌ನಿಂದ ಅಥವಾ ಜೆಡಿಎಸ್‌ನಿಂದ ಬಿ. ಫಾರ್ಮ್ ಪಡೆದು ಅದೇ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಬೇಕಿದೆ. ಜೆಡಿಎಸ್‌ನಿಂದ ನಿಂತರೆ ದಾಖಲೆಯಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿಯೇ ಪರಿಗಣಿಸಲ್ಪಡುತ್ತಾರೆ. ಇದರಿಂದ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರಾ ಎಂಬುದು ಸಾಮಾನ್ಯ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಬೆಂಬಿಡದ ಪ್ರಮೋದ್  ಬಿಜೆಪಿ ಸೇರ್ಪಡೆ, ಟಿಪ್ಪು ಜಯಂತಿ ವಿವಾದ, ದ್ವಂದ್ವ ನಿಲುವುಗಳು !

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಂತ್ರಿಯಾಗಿದ್ದುಕೊಂಡು ಬಿಜೆಪಿ ಸೇರ್ಪಡೆ ಸಂಬಂಧ ನೀಡುತಿದ್ದ ಗಂಭೀರತೆ ಇಲ್ಲದ ಸಡಿಲ ಹೇಳಿಕೆ ಗಳಿಂದ ಪ್ರಮೋದ್ ಮಧ್ವರಾಜ್  ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆರಂಭಿಸಿದ ಟಿಪ್ಪು ಜಯಂತಿ ಆಚರಣೆಗೆ ಸತತವಾಗಿ ಗೈರುಹಾಜರಾಗುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದ್ದರು. ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಯಾವುದೇ ಬದ್ಧತೆ ತೋರಿಸದೆ ಸಂದರ್ಭ ಸಾಧಕತನ ಮಾಡುತ್ತಾ ಬಂದಿದ್ದಾರೆ ಎಂಬ ಆರೋಪ ಪ್ರಮೋದ್ ಅವರ ಮೇಲಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಸ್ಥಳೀಯ ಬಿಜೆಪಿ ನಾಯಕರ ತೀವ್ರ ವಿರೋಧದಿಂದಾಗಿ ಮಾತ್ರ ಅವರು ಬಿಜೆಪಿ ಸೇರದೆ ಕಾಂಗ್ರೆಸ್ ನಲ್ಲಿ ಉಳಿದರು ಎಂದು ಅವರ ಪಕ್ಷದ ಸ್ಥಳೀಯ ನಾಯಕರೇ ದೂರುತ್ತಿದ್ದಾರೆ.

ಈಗ ಅವರು ಜೆಡಿಎಸ್ ಸೇರಲು ಸಿದ್ಧವಾಗಿರುವುದು ಅವರ ವಿರುದ್ಧದ ಅವಕಾಶವಾದಿ ರಾಜಕಾರಣದ ಆರೋಪಗಳಿಗೆ ಪುಷ್ಟಿ ನೀಡಿದೆ. ಸದಾ ಮೃದು ಹಿಂದುತ್ವ ನೀತಿಯನ್ನೇ ಪಾಲಿಸಿಕೊಂಡು ಬಂದಿರುವ ಪ್ರಮೋದ್ ಅವರ ವಿರುದ್ಧ ಜಿಲ್ಲೆಯ ಅಲ್ಪಸಂಖ್ಯಾತರೊಳಗೆ ಭಾರೀ ಅಸಮಾಧಾನವಿದೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾದರೆ ನಾವು ಖಂಡಿತ ಬೆಂಬಲಿಸುವುದಿಲ್ಲ ಎಂದು ಅವರು ಹೇಳುತ್ತಲೇ ಬಂದಿದ್ದರು. ಈಗ ಜೆಡಿಎಸ್ ಗೆ ಕ್ಷೇತ ಬಿಟ್ಟು ಕೊಟ್ಟ ಮೇಲೆ ಅಲ್ಲಿಂದಲೂ ಅವರೇ ಅಭ್ಯರ್ಥಿಯಾಗುತ್ತಾರೆ ಎಂಬ ಮಾಹಿತಿ ಬಂದಿದ್ದು ಜಿಲ್ಲೆಯ ಕಾಂಗ್ರೆಸಿಗರಿಗೆ , ಪ್ರಗತಿಪರರಿಗೆ ಹಾಗು ಅಲ್ಪಸಂಖ್ಯಾತರಿಗೆ ಅಸಮಾಧಾನ ತಂದಿದೆ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನ ಪರ ಪ್ರಚಾರ ವಾಹನ ದಲ್ಲಿ ಪಕ್ಷದ ಚಿಹ್ನೆ ಬಳಸಿಕೊಳ್ಳದ ಪ್ರಮೋದ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇತ್ತೀಚೆಗೆ ಬ್ರಹ್ಮಾವರ ಸಮೀಪದ ಪೇತ್ರಿಯ ಚರ್ಚ್ ಸಮಾರಂಭದಲ್ಲಿ ಮಾತನಾಡಿದ ಪ್ರಮೋದ್, ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡಿ ರುವುದು ಸರಿಯೋ ತಪ್ಪೊಗೊತ್ತಿಲ್ಲ. ಆದರೆ ಟಿಪ್ಪು ಸೈನ್ಯ ಪೇತ್ರಿಯ ಹಿಂದಿನ ಚರ್ಚ್ ನಾಶ ಮಾಡಿದಕ್ಕಾಗಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರು ಮಾಡಿದ್ದಾರೆ ಎಂದು ವಿವಾದ್ಮಕ ಹೇಳಿಕೆಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News