ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮಲ್ಪೆ ಸಮುದ್ರ ಪಾಲು: ಮೂವರ ರಕ್ಷಣೆ

Update: 2019-03-19 14:39 GMT

ಮಲ್ಪೆ, ಮಾ.19: ಬೆಂಗಳೂರಿನ ಖಾಸಗಿ ಇಂಜಿನಿಯರ್ ಕಾಲೇಜಿನ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿರುವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ ತಿಪಟೂರಿನ ನರಸಿಂಹ ಎಂಬವರ ಮಗ ಕೀರ್ತನ್ (21) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಸುಮಾರು 30 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದರು. ಇವರೊಂದಿಗೆ ಅದೇ ಕಾಲೇಜಿನ ಇಂಜಿನಿಯರಿಂಗ್ ಮುಗಿಸಿದ ಕಿರ್ತನ್ ಕೂಡ ಬಂದಿದ್ದರು.

ಬೆಳಗ್ಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮಧ್ಯಾಹ್ನ ವೇಳೆ ಮಲ್ಪೆ ಬೀಚ್‌ಗೆ ತೆರೆಳಿದ್ದರು. ಅಲ್ಲಿ 30 ಮಂದಿ ವಿದ್ಯಾರ್ಥಿಗಳು ಕೂಡ ನೀರಿಗೆ ಇಳಿದು ಆಟ ಆಡುತ್ತಿದ್ದರು. ಈ ವೇಳೆ ಬೀಚ್‌ನಲ್ಲಿರುವ ಜೀವ ರಕ್ಷಕರು ವಿದ್ಯಾರ್ಥಿಗಳಿಗೆ ಅಪಾಯದ ಎಚ್ಚರಿಕೆಯನ್ನು ನೀಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಲ್ಪೆ ಬೀಚ್‌ನಿಂದ ಸುಮಾರು ಒಂದು ಕಿ.ಮೀ. ದೂರದ ತೊಟ್ಟಂ ಬೀಚ್‌ವರೆಗೆ ನಡೆದುಕೊಂಡು ಹೋಗಿ ಅಲ್ಲಿನ ಸಮುದ್ರದಲ್ಲಿ ಆಟ ಆಡುತ್ತಿದ್ದರು. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನಾಲ್ಕು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇತರ ವಿದ್ಯಾರ್ಥಿಗಳ ಬೊಬ್ಬೆ ಕೇಳಿ ಓಡಿ ಬಂದ ಜೀವ ರಕ್ಷಕರು ಕೂಡಲೇ ಸಮುದ್ರಕ್ಕೆ ಹಾರಿ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಿದರು. ಆದರೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಕೀರ್ತನ್ ಆಗಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮೃತ ದೇಹವನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News