​ಜನಾರ್ದನ ಪೂಜಾರಿಗೆ ಬೆದರಿಕೆ ಪ್ರಕರಣ: ಆರೋಪಿಯ ಬಂಧನ

Update: 2019-03-19 15:47 GMT

ಮಂಗಳೂರು, ಮಾ.19: ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರನ್ನು ಗಡೀಪಾರು ಹಾಗೂ ಎನ್‌ಕೌಂಟರ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ ಮಾಡಿ ಕಳುಹಿಸಿದ್ದ ಎನ್ನಲಾದ ವ್ಯಕ್ತಿಯನ್ನು ನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪುತ್ತೂರು ನಿವಾಸಿ ಅಬ್ದುಲ್ ಹಕೀಮ್ (40) ಬಂಧಿತ ಆರೋಪಿ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಈತ ಮಂಗಳವಾರ ತವರಿಗೆ ಮರಳುತ್ತಿದ್ದಾಗ, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾವೂರು ಪೊಲೀಸರು ಬಂಧಿಸಿ, ಬಳಿಕ ಜಾಮೀನು ಮೇಲೆ ಬಿಡುಗಡೆಗೊಳಿಸಿದ್ದಾರೆ.

ಪ್ರಕರಣ ವಿವರ: ಡಿಸೆಂಬರ್‌ನಲ್ಲಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ, ‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜನಾರ್ದನ ಪೂಜಾರಿ ಹೇಳಿಕೆ ನೀಡಿದ್ದರು. ಇದು ಚರ್ಚೆ ಹಾಗೂ ವಿರೋಧಕ್ಕೂ ಕಾರಣವಾಗಿತ್ತು. ಈ ಮಧ್ಯೆ, ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ‘ಪೂಜಾರಿ ಅವರನ್ನು ಎನ್‌ಕೌಂಟರ್ ಮಾಡಬೇಕು’ ಎಂದು ಧ್ವನಿಮುದ್ರಿಕೆ ಮಾಡಿ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ. ಇದು ವೈರಲ್ ಆಗಿತ್ತು.

‘ಪೂಜಾರಿ ಅವಹೇಳನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಸಹಿತ ಹಲವರು ಆಗ್ರಹಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ಕಾವೂರು ಪೊಲೀಸ್ ಠಾಣೆಯಲ್ಲೂ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News