ಉಡುಪಿ-ಚಿಕ್ಕಮಗಳೂರು ಚುನಾವಣೆ: ಮೊದಲ ದಿನ ನಾಮಪತ್ರವಿಲ್ಲ

Update: 2019-03-19 16:12 GMT

ಉಡುಪಿ, ಮಾ.19: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಯ ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಕಚೇರಿಯಿಂದ ತಿಳಿದುಬಂದಿದೆ.

ನಾಮಪತ್ರ ಸಲ್ಲಿಕೆಗೆ ಇಂದಿನಿಂದ ಮಾ. 26 ಮಂಗಳವಾರದವರೆಗೆ ಅವಕಾಶವಿದೆ. ಉಡುಪಿಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರ ಈ ಲೋಕಸಭಾ ವ್ಯಾಪ್ತಿಗೆ ಬರುತಿದ್ದು, ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಾ. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾ. 29ರ ಅಪರಾಹ್ನ 3 ಗಂಟೆ ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನವಾಗಿದೆ. ಅದೇ ದಿನ ಸಂಜೆ ಸ್ಪರ್ಧಾಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಅವರವರ ಚಿಹ್ನೆಯೊಂದಿಗೆ ಪ್ರಕಟಿಸಲಾಗುವುದು. ಎ.18ರ  ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಹೆಪ್ಸಿಬಾ ರಾಣಿ ನುಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ನಾಮಪತ್ರ ದೊಂದಿಗೆ 25,000 ರೂ.ವನ್ನು ಠೇವಣಾತಿ ಹಣವಾಗಿ ಇಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿ 12,500ರೂ. ಠೇವಣಿ ನೀಡಬೇಕಿದ್ದು, ಇದಕ್ಕಾಗಿ ಜಾತಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ 48 ಗಂಟೆಯೊಳಗೆ ಸೈನ್ಯದಲ್ಲಿ ಸೇವೆ ಸಲ್ಲಿಸುವ ಸೇವಾ ಮತದಾರರಿಗೆ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಮತಪತ್ರವನ್ನು ರಚಿಸಿ ಆನ್‌ಲೈನ್ ಮೂಲಕ ಸಂಬಂಧಪಟ್ಟ ಸೈನ್ಯ ಘಟಕದ ಮುಖ್ಯಸ್ಥರಿಗೆ ರವಾನಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 555 ಸೇವಾ ಮತದಾರರಿದ್ದಾರೆ. ಕುಂದಾಪುರ-49, ಉಡುಪಿ-50, ಕಾಪು-45, ಕಾರ್ಕಳ-28, ಶೃಂಗೇರಿ-66, ಮೂಡಿಗೆರೆ-87, ಚಿಕ್ಕಮಗಳೂರು-142 ಹಾಗೂ ತರಿಕೆರೆ-88 ಮಂದಿ ಸೇವಾ ಮತದಾರರಿದ್ದಾರೆ.

ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರ ಸಲ್ಲಿಸಿದ ದಿನದಿಂದ ಚುನಾವಣಾ ಫಲಿತಾಂಶ ಘೋಷಣೆಯಾಗುವ ದಿನದವರೆಗಿನ ಚುನಾವಣಾ ಲೆಕ್ಕಪತ್ರವನ್ನು ನಿಗದಿತ ನಮೂನೆಯಲ್ಲಿ ನಮೂದಿಸಬೇಕು. ಹಾಗೂ ದಾಖಲೆಯನ್ನು ಲೆಕ್ಕಪತ್ರ ವೀಕ್ಷಕರ ಪರಿಶೀಲನೆಗೆ ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

14.94 ಲಕ್ಷ ಮತದಾರರು: ಕ್ಷೇತ್ರದಲ್ಲಿ 7,30,289 ಪುರುಷ, 7,64,105 ಮಹಿಳಾ ಹಾಗೂ 50 ತೃತೀಯ ಲಿಂಗ ಮತದಾರರು ಸೇರಿದಂತೆ ಒಟ್ಟು 14,94,444 ಮಂದಿ ಮತದಾರರು ಇದ್ದು, ಇವರಿಗಾಗಿ ಒಟ್ಟು 1837 ಮತಗಟ್ಟೆಯನ್ನು ತೆರೆಯಲಾಗುತ್ತದೆ. ಕುಂದಾಪುರ-222, ಉಡುಪಿ-226, ಕಾಪು-208, ಕಾರ್ಕಳ-209, ಶೃಂಗೇರಿ-256, ಮೂಡಿಗೆರೆ-231, ಚಿಕ್ಕಮಗಳೂರು-257, ತರಿಕೆರೆ-228 ಮತಗಟ್ಟೆಗಳಿರುತ್ತವೆ ಎಂದವರು ಹೇಳಿದರು.

ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಮೇಲುಸ್ತುವಾರಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನೋಡಿಕೊಳ್ಳಲಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿ ಗರಿಷ್ಠ 70 ಲಕ್ಷ ರೂ.ಗಳನ್ನು ಮಾತ್ರ ಚುನಾವಣಾ ವೆಚ್ಚ ಮಾಡಲು ಅವಕಾಶವಿದೆ. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಮಾಡುವ ಖರ್ಚಿನ ಮೇಲೆ ನಿಗಾ ವಹಿಸಲು ಲೆಕ್ಕಪತ್ರ ನಿಗಾ ಕೋಶ ಹಾಗೂ ಲೆಕ್ಕಪತ್ರ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಲಿಖಿತವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.

ವಿವರ ಹೀಗಿದೆ.

ಜಿಲ್ಲಾಧಿಕಾರಿ ಕಚೇರಿ, ಉಡುಪಿ ಜಿಲ್ಲೆ (ದೂರವಾಣಿ:1950), ತಾಲೂಕು ಕಚೇರಿ, ಕಾರ್ಕಳ (09258-230201), ತಾಲೂಕು ಕಚೇರಿ ಕುಂದಾಪುರ (08254-298058), ತಾಲೂಕು ಕಚೇರಿ ಉಡುಪಿ (0820-2521299), ತಾಲೂಕು ಕಚೇರಿ ಕಾಪು (0820-2551344/2551345), ತಾಲೂಕು ಕಚೇರಿ ಬೈಂದೂರು (08254-252057/251657/251857).

ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗ ಸಿ-ವಿಜಿಲ್ (c-vigil) ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಮೂಲಕ ಜಿಲ್ಲೆ/ಯಲ್ಲಿ ಚುನಾವಣೆಗೆ ಸಂಬಂಧಿಸಿದ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಪೋಟೊ ಹಾಗೂ ವಿಡಿಯೋ ಮೂಲಕ ದೂರುಗಳನ್ನು ದಾಖಲಿಸಬಹುದು ಎಂದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಸಾರ್ವಜನಿಕ ಖಾಸಗಿ ಸೊತ್ತುಗಳಲ್ಲಿ ಅಂಟಿಸಿರುವ 92 ಗೋಡೆ ಬರಹಗಳನ್ನು, 781 ಬ್ಯಾನರ್‌ ಗಳು, 1230 ಇತರೆ ಹಾಗೂ 1971 ಅಂದಗೆಡಿಸುವ ವಸ್ತುಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಗ್ರಾಮಮಟ್ಟದಲ್ಲಿ ಸ್ವೀಪ್ ಸಮಿತಿಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಇವಿಎಂ-ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆ ನಡೆಯುತ್ತಿದೆ. ಈವರೆಗೆ 40,000ಕ್ಕೂ ಅಧಿಕ ಅಣಕು ಮತದಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News