ಲೋಕಸಭೆ ಚುನಾವಣೆ: ಬಂಟ್ವಾಳದಲ್ಲಿ ಒಟ್ಟು 2,19,702 ಮತದಾರರು

Update: 2019-03-19 16:35 GMT

ಬಂಟ್ವಾಳ, ಮಾ. 19: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಬಂಟ್ವಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,19,702 ಮತದಾರರು ಈ ಬಾರಿ 249 ಮತದಾನ ಕೇಂದ್ರಗಳಲ್ಲಿ ಮತದಾನ ಮಾಡಲಿದ್ದಾರೆ ಎಂದು ಬಂಟ್ವಾಳ ತಾಲೂಕಿನ ಸಹಾಯಕ ಚುನಾವಣಾಕಾರಿ ಮಹೇಶ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ಒಟ್ಟು ಮತದಾರ ಪೈಕಿ 1,62,936 ಪುರುಷರು ಮತ್ತು 1,66,107 ಮಹಿಳೆಯರು ಇದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಮಂಗಳೂರು ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ಭಾಗ ಒಳಪಡುತ್ತಿದ್ದು, ಬಂಟ್ವಾಳ ತಾಲೂಕಿಗೆ ಒಳಪಡುವ ಮಂಗಳೂರು ಕ್ಷೇತ್ರದಲ್ಲಿ 27,113 ಪುರುಷರು ಮತ್ತು 27,335 ಮಹಿಳೆಯರು ಮತ್ತು 4 ಇತರರು ಸೇರಿ ಒಟ್ಟು 54,452 ಮತದಾರರಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿದ್ದು, 1,08,469 ಪುರುಷರು, 1,11,233 ಮಹಿಳೆಯರು ಸೇರಿ ಒಟ್ಟು 2,19,702 ಮತದಾರರಿದ್ದಾರೆ.

ಬಂಟ್ವಾಳ ತಾಲೂಕಿಗೆ ಒಳಪಡುವ ಪುತ್ತೂರು ಕ್ಷೇತ್ರದಲ್ಲಿ 61 ಮತಗಟ್ಟೆಗಳಿದ್ದು, 27,354 ಪುರುಷರು, 27,539 ಮಹಿಳೆಯರು ಸೇರಿ ಒಟ್ಟು 54,893 ಮತದಾರರು ಜನವರು 16ರಂದು ಸೇರ್ಪಡೆಯಾದ ಮತದಾರರ ಪಟ್ಟಿಯನ್ವಯ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಬಂಟ್ವಾಳ ಕ್ಷೇತ್ರದಲ್ಲಿ 249 ಬೂತ್‍ಗಳಿದ್ದು, ಇವುಗಳ ಪೈಕಿ 83 ಸೂಕ್ಷ್ಮಾತಿಸೂಕ್ಷ್ಮ ಮತಗಟ್ಟೆಗಳು. ಇವುಗಳ ಮೇಲೆ ನಿಗಾ ಇಡಲು 21 ಸೆಕ್ಟರ್ ಆಫೀಸರ್ ಗಳು 9 ತಂಡಗಳ ಫ್ಲೈಯಿಂಗ್ ಸ್ಕ್ವಾಡ್‍ಗಳು ದಿನದ 24 ತಾಸುಗಳೂ ತಂಡಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಲ್ಲದೆ ವಿಡಿಯೋ ಸರ್ವೈಲೆನ್ಸ್ ತಂಡ, ವಿಡಿಯೋ ವೀಕ್ಷಣಾ ತಂಡ, ಗಡಿ ವಿಚಕ್ಷಣಾ ತಂಡಗಳಿವೆ ಎಂದರು.

ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಅಕೌಂಟಿಂಗ್ ತಂಡವಿದ್ದು, ಅಭ್ಯರ್ಥಿಗಳಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಪ್ರಮುಖರ ಹಣಕಾಸು ವಹಿವಾಟುಗಳ ಮೇಲೆ ನಿಗಾ ಇಡುತ್ತದೆ. ಸಾರ್ವಜನಿಕರಿಗೆ ದೂರು ನೀಡಲು ಸಿವಿಜಿಲ್ ಆಪ್ ಇದ್ದು, ಇದನ್ನು ನೇರವಾಗಿ ಮೊಬೈಲ್‍ನಲ್ಲಿ ಡೌನ್ ಲೋಡ್ ಮಾಡಬಹುದು. ದೂರು ನೀಡಿದ 90 ನಿಮಿಷಗಳಲ್ಲಿ ದೂರಿನ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ರಾಷ್ಟ್ರೀಯ ಮಟ್ಟದ ಅಹವಾಲು ವಿಲೇವಾರಿ ಘಟಕವೂ ಇದ್ದು, ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುವಿಧಾ ಘಟಕವನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜಕೀಯ ವ್ಯಕ್ತಿಗಳನ್ನು ಶುಭ ಸಮಾರಂಭಗಳಿಗೆ ಆಹ್ವಾನಿಸಲು ತಕರಾರೇನಿಲ್ಲ. ಆದರೆ, ಅವರು ಶುಭಾಶಯ ಮಾಡಬಹುದು, ಪ್ರಭಾವ ಬೀರಲು ಗಿಫ್ಟ್ ಕೊಟ್ಟರಷ್ಟೇ ತಕರಾರು ಎಂದು ಹೇಳಿದ ಮಹೇಶ್, ಈ ಬಾರಿ ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ನೀತಿ ಸಂಹಿತೆ ಉಲ್ಲಂಘನೆ ನಡೆಯದಂತೆ ಅಧಿಕಾರಿಗಳಷ್ಟೇ ಸಾರ್ವಜನಿಕರಿಗೂ ಅವಕಾಶಗಳು ಗರಿಷ್ಠ ಮಟ್ಟದಲ್ಲಿ ಒದಗಿಸಲಾಗಿದೆ ಎಂದರು.

ಕಂಟ್ರೋಲ್ ರೂಮ್:

ಸಾರ್ವಜನಿಕರಿಗೆ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ದೂರುಗಳೇನಾದರೂ ಇದ್ದರೆ ಜಿಲ್ಲಾ ಮಟ್ಟದಲ್ಲಿ 1950 ಮತ್ತು ತಾಲೂಕು ಮಟ್ಟದಲ್ಲಿ 08255-232500 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.

ಬಂಟ್ವಾಳ ತಾಲೂಕಿಗೆ ಚುನಾವಣೆಗೆ ಸಂಬಂಧಿಸಿ ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿರುವ ರಾಜಣ್ಣ ಅವರು ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ ಮತದಾರರ ಜಾಗೃತಿಗೆ ಸಂಬಂಧಿಸಿ ಸ್ವೀಪ್ ಅಭಿಯಾನ ಆರಂಭಗೊಂಡಿದೆ. ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಹಿತ ಚುನಾವಣೆಗೆ ಸಂಬಂಧಿತ ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ ಎಂದವರು ತಿಳಿಸಿದರು.

ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ, ಚುನಾವಣಾ ನೋಡಲ್ ಅಧಿಕಾರಿ ರಾಜಣ್ಣ ಈ ಸಂದರ್ಭ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News