'ಹೋಳಿ ಮೆರವಣಿಗೆಗೆ ಅನುಮತಿ ನಿರಾಕರಿಸಿದರೆ ಮತದಾನ ಬಹಿಷ್ಕಾರ'

Update: 2019-03-19 16:36 GMT

ಕುಂದಾಪುರ, ಮಾ.19: ಈ ಬಾರಿಯ ಹೋಳಿ ಹಬ್ಬದ ಮೆರವಣಿಗೆಗೆ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅನುಮತಿ ನಿರಾಕರಿಸಿದರೆ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸುವುದಾಗಿ ಖಾರ್ವಿ ಸಮುದಾಯ ಎಚ್ಚರಿಕೆ ನೀಡಿದೆ.

ಕುಂದಾಪುರ ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ಸರ್ವಾನುಮತದ ಈ ನಿರ್ಧಾರ ವನ್ನು ತೆಗೆದುಕೊಳ್ಳಲಾಗಿದೆ. ಮಾ.20ರಿಂದ ಮಾ.22 ರವರೆಗೆ ಕರಾವಳಿಯಲ್ಲಿ ಖಾರ್ವಿ ಸಮಾಜದ ಎಲ್ಲರೂ ಸೇರಿ ಆಚರಿಸುವ ವಿಶಿಷ್ಟ ಕಾಮನ ಹಬ್ಬ ‘ಹೋಳಿ’ ಆಚರಣೆಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಖಾರ್ವಿ ಸಮಾಜದ ಮುಖಂಡ ಜಯಾನಂದ ಖಾರ್ವಿ ಮಾತನಾಡಿ, ಚುನಾವಣೆಗೂ ಹೋಳಿಗೂ ಸಂಬಂಧವಿಲ್ಲ. ಹೋಳಿ ಹಬ್ಬ ಒಂದು ಸಮು ದಾಯದ ಹಬ್ಬ. ಸಾಂಪ್ರದಾಯಿಕವಾಗಿ ಖಾರ್ವಿ ಸಮಾಜಕ್ಕೆ ಇರುವ ಒಂದೇ ಹಬ್ಬ ಇದಾಗಿರುವುದರಿಂದ ಸಂಪ್ರದಾಯದ ಆಚರಣೆ ಅಡ್ಡಿಪಡಿಸುವುದು ಸರಿಯಲ್ಲ. ಕುಂದಾಪುರದಲ್ಲಿಯೇ ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಸೇರಿ ಆಚರಿಸುವ ಹಬ್ಬ ಇದಾಗಿದೆ. ಈ ಬಗ್ಗೆ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಮುಖಂಡ ಚಂದ್ರಶೇಖರ ಖಾರ್ವಿ ಮಾತನಾಡಿ, ಹಬ್ಬದ ಆಚರಣೆಗೆ ನೀತಿ ಸಂಹಿತೆ ಅಡ್ಡಿಯಾಗುವುದಾದರೆ ಅಂತಹ ಚುನಾವಣೆಯನ್ನೇ ನಮ್ಮ ಸಮಾಜ ಬಹಿಷ್ಕರಿಸುತ್ತದೆ. ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನ ಬದ್ಧವಾಗಿ ಒಂದು ಸಮಾಜದ ಸಂಪ್ರದಾಯದ ಆಚರಣೆಗೆ ತಡೆಯೊಡ್ಡುವ ಯಾವುದೇ ಹಕ್ಕು ಯಾರಿಗೂ ಇಲ್ಲ. ಒಂದು ವೇಳೆ ಜನರಿಗಾಗಿ ಇರಬೇಕಾದ ಕಾನೂನು ಕಟ್ಟಳೆಗಳಿಂದ ಒಂದು ಸಮಾಜಕ್ಕೆ ಅನ್ಯಾಯವಾಗುತ್ತದೆ ಯಾದರೆ ಅದರ ವಿರುದ್ಧ ಚುನಾವಣಾ ಬಹಿಷ್ಕಾರದ ಮೂಲಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಿನಕರ ಪಠೇಲ, ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News