ರೌಡಿ ಶೀಟರ್‌ ಫಯಾಝ್ ಜೊತೆ ವೇದಿಕೆ ಹಂಚಿಕೊಂಡ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ !

Update: 2019-03-19 16:54 GMT

ಕಾರವಾರ, ಮಾ.19: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಗಡೀಪಾರು ಆದೇಶವಿರುವ ರೌಡಿ ಶೀಟರ್‌ನೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವ ಫೋಟೊ, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು ಇದು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರು ಸೇರಿ ದಂತೆ ಸಂಘಪರಿವಾರ, ಬಿಜೆಪಿಯ ಸ್ಥಳೀಯ ನಾಯಕರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರೌಡಿಶೀಟರ್ ಹಾಗೂ ಭೂಗತ ಪಾತಕಿಗಳ ಜೊತೆ ನಂಟು ಹೊಂದಿರುವ ಆರೋಪಿ ಶಿರಸಿಯ ಫಯಾಝ್ ಎಂಬಾತನ ಜೊತೆಗೆ ಸಂಸದರು ವೇದಿಕೆ ಹಂಚಿಕೊಂಡಿರುವ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗಿರುವ ಫೋಟೊ, ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬಗ್ಗೆ ಸಂಘಪರಿವಾರ ಸಹಿತ ಬಿಜೆಪಿಯ ಸ್ಥಳೀಯ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೆ ಭೂಗತ ಪಾತಕಿಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪಿ ಹಾಗೂ ಶಿರಸಿ ಠಾಣೆಯಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿವಿಧ ಆರೋಪದಡಿ ರೌಡಿ ಶೀಟರ್ ಆಗಿರುವ ಫಯಾಝ್ ಎಂಬಾತನೊಂದಿಗೆ ಸಚಿವ ಹೆಗಡೆ ಹಲವು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ಫಯಾಝ್‌ನನ್ನು ಬಿಜೆಪಿ ಮುಸ್ಲಿಂ ಮೋರ್ಚಾದ ಪದಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಿರುವ ಸಂಸದರು, ಈತನನ್ನು ಲೋಕಸಭೆ ಚುನಾವಣೆಯ ಪ್ರಚಾರಕ್ಕೂ ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪಕ್ಷದಲ್ಲಿ ಫಯಾಝ್‌ಗೆ ನೀಡಲಾಗಿರುವ ಸ್ಥಾನಮಾನಗಳ ಬಗ್ಗೆ ಅಧೀಕೃತ ಘೋಷಣೆಯಾಗಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಮಾರಿಕಾಂಭಾ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ, ಜಿಜೆಪಿಯ ಹಲವು ರ್ಯಾಲಿಗಳು ಹಾಗೂ ಶಿರಸಿ ಸೇರಿದಂತೆ ಉತ್ತರ ಕನ್ನಡದಾದ್ಯಂತ ಆಯೋಜಿಸಲಾಗುತ್ತಿರುವ ನವಭಾರತ ಕಾರ್ಯಕ್ರಮಗಳಲ್ಲಿ ಸಚಿವ ಹೆಗಡೆ ಅವರು ಫಯಾಝ್ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News