ಮಂಗಳೂರು ವಿವಿ ಶೈಕ್ಷಣಿಕ ಮಂಡಳಿಯ ನಾಲ್ಕನೇ ಸಾಮಾನ್ಯ ಸಭೆ

Update: 2019-03-19 17:21 GMT

ಮಂಗಳೂರು, ಮಾ.19: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಕಲಚೇತನರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ರಿಯಾಯಿತಿ ಹಾಗೂ ಉನ್ನತ ಶಿಕ್ಷಣದಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಭಾರ ಕುಲಪತಿ ಕಿಶೋರಿ ನಾಯಕ್ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ಇಂದು ನಡೆದ 2018-19ನೆ ಸಾಲಿನ ಶೈಕ್ಷಣಿಕ ಮಂಡಳಿಯ ನಾಲ್ಕನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈ ಹಿಂದೆ ವಿಕಲಚೇತನರಿಗೆ ಉನ್ನತ ಶಿಕ್ಷಣದಲ್ಲಿ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿತ್ತು.ಹೊಸದಾಗಿ ಸರಕಾರದ ಆದೇಶದ ಪ್ರಕಾರ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಈ ಮೀಸಲಾತಿಯನ್ನು ಶೇ.5ಕ್ಕೆ ಏರಿಸಬೇಕು ಮತ್ತು ವಯಸ್ಸಿನ ಮಿತಿಯಲ್ಲಿಯೂ 5 ವರ್ಷ ವಿನಾಯಿತಿ ನೀಡಬೇಕು ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆ ಈ ಬಗ್ಗೆ ತಿರ್ಮಾನ ಕೈಗೊಂಡಿದೆ.

13 ನೂತನ ಕಾಲೇಜುಗಳ ಸಂಯೋಜನೆ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಈ ಹಿಂದೆ 210 ಕಾಲೇಜುಗಳು ಸಂಯೋಜನೆಗೊಂಡಿದ್ದವು. 2018-19ನೇ ಸಾಲಿಗೆ 138 ಖಾಸಗಿ, 37 ಸರಕಾರಿ, ಐದು ಸ್ವಾಯತ್ತ ಹಾಗೂ ಐದು ಸಂಯೋಜಿತ, 11 ಶಾಶ್ವತ ಸಂಯೋಜಿತ ಕಾಲೇಜುಗಳು ಮತ್ತು 13 ಹೊಸ ಕಾಲೇಜುಗಳು ಸೇರಿ ಒಟ್ಟು 209 ಕಾಲೇಜುಗಳನ್ನು ಸಂಯೋಜಿಸಲು ತೀರ್ಮಾನಿಸಲಾಯಿತು. 13 ಕಾಲೇಜುಗಳು ಹೊಸದಾಗಿ ಸಂಯೋಜನೆಗೊಂಡಿದೆ.

ಸಂಯೋಜನೆಗೊಂಡ ಕಾಲೇಜುಗಳ ಪೈಕಿ ಪುತ್ತೂರಿನ ಬಪ್ಪಳಿಕೆಯ ಅಂಬಿಕಾ ಮಹಾವಿದ್ಯಾಲಯ, ಮಂಗಳೂರು ಕುಡುಪುವಿನ ತೇಜಸ್ವಿನಿ ಕಾಲೇಜ್ ಆಫ್ ಯೋಗಿಕ್ ಸೈನ್ಸಸ್, ಸೋಮವಾರಪೇಟೆ ಕುಶಾಲನಗರದ ಎಂ.ಎಸ್. ಪದವಿ ಕಾಲೇಜು, ಸೋಮವಾರಪೇಟೆಯ ಚೌಡ್ಲು ಗ್ರಾಮದ ಚಾಣಕ್ಯ ಕಾಲೇಜು, ಪಂಪವೆಲ್‌ನ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ, ಕುಂದಾಪುರ ಕೆರಾಡಿ ವರಸಿದ್ಧಿ ವಿನಾಯಕ ಪ್ರಥಮ ದರ್ಜೆ ಕಾಲೇಜ್, ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಎಜುಕೇಶನ್, ನೀರುಮಾರ್ಗ ಪದಮಾಲೆ ವಿದ್ಯಾನಗರ ಮಂಗಳ ಕಾಲೇಜು ಸ್ಪೀಚ್ ಆ್ಯಂಡ್ ಹಿಯರಿಂಗ್, ಅತ್ತಾವರ ಎಸ್.ಎಲ್. ಮಥಾಯಿಸ್ ರೋಡ್ ಇಂಡಿಯನ್ ಡಿಸೈನ್ ಸ್ಕೂಲ್, ಜೋಕಟ್ಟೆ ಅಂಜುಮಾನ್ ಪ್ರಥಮ ದರ್ಜೆ ಕಾಲೇಜ್, ನಿಟ್ಟೆ ಕೊಡಕಲ್‌ನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೂರಿಸಂ ಆ್ಯಂಡ್ ಹೋಸ್ಪಿಟಾಲಿಟಿ ಸ್ಟಡೀಸ್, ಪುತ್ತೂರು ದರ್ಬೆಯ ಗ್ಲೋರಿಯಾ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಸಂಯೋಜನೆಗೆ ಮಂಜೂರಾತಿ ನೀಡಲಾಯಿತು.

ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯ ಪದವಿ ಮಟ್ಟದ ಬಿ.ಕಾಂ ಟ್ಯಾಕ್ಸ್ ಪ್ರೊಸಿಜರ್ ಆ್ಯಂಡ್ ಪ್ರಾಕ್ಟೀಸ್ ಪಠ್ಯಕ್ರಮ, ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯಲ್ಲಿ ರಚಿಸಲಾದ ಕೋರ್ಸ್ ಗಳ ಪದ್ಧತಿಯಲ್ಲಿ ಬಿ.ಎ ಟ್ರಾವೆಲ್ಸ್ ಆ್ಯಂಡ್ ಟೂರಿಸಂ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ವಿ.ವಿ. ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ಕ್ರೀಡಾ ಶುಲ್ಕವನ್ನು ಪರಿಷ್ಕರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕುಲಸಚಿವ ಎ.ಎಂ.ಖಾನ್, ರವೀಂದ್ರ ಆಚಾರ್ಯ, ಹಣಕಾಸು ಅಧಿಕಾರಿ ದಯಾನಂದ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News