ಗೋವಾದಲ್ಲಿ ವಿಶ್ವಾಸಮತ ಗೆದ್ದ ಬಿಜೆಪಿ ನೇತೃತ್ವದ ಮೈತ್ರಿ ಸರಕಾರ

Update: 2019-03-20 18:00 GMT

ಪಣಜಿ, ಮಾ.20: ಗೋವಾದ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದ ಪ್ರಮೋದ್ ಸಾವಂತ್ ಬುಧವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ವಿಧಾನಸಭೆಯಲ್ಲಿ ಸಾವಂತ್ ಪರ 20 ಸದಸ್ಯರು ಮತ ಚಲಾಯಿಸಿದರು.

ಸಾವಂತ್ ನೇತೃತ್ವದ ಬಿಜೆಪಿ ಸರಕಾರ - 12 ಬಿಜೆಪಿ ಶಾಸಕರು, ಮಿತ್ರಪಕ್ಷಗಳಾದ ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ)ಯ ತಲಾ ಇಬ್ಬರು ಹಾಗೂ ಮೂವರು ಪಕ್ಷೇತರರ ಸಹಿತ 21 ಶಾಸಕರ ಬೆಂಬಲ ಇರುವುದಾಗಿ ಹೇಳಿತ್ತು. ಸರಕಾರವನ್ನು ಬೆಂಬಲಿಸಲು ಮೈತ್ರಿಪಕ್ಷಗಳು ಕಠಿಣ ಷರತ್ತು ಒಡ್ಡಿದ್ದವು ಎನ್ನಲಾಗಿದೆ. ಆರಂಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದ್ದ ಜಿಎಫ್‌ಪಿಯ ವಿಜಯ್ ಸರ್ದೇಸಾಯಿ ಅಂತಿಮವಾಗಿ ಉಪಮುಖ್ಯಮಂತ್ರಿ ಹುದ್ದೆ ಪಡೆದರು. ಇವರ ಜೊತೆಗೆ ಎಂಜಿಪಿಯ ಸುದಿನ್ ಧಾವಳೀಕರ್ ಕೂಡಾ ಉಪಮುಖ್ಯಮಂತ್ರಿ ಸ್ಥಾನ ಪಡೆದಿದ್ದಾರೆ.

40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ವಿಧಾನಸಭೆಯ ಸದಸ್ಯರಾದ ಬಿಜೆಪಿಯ ಮನೋಹರ್ ಪಾರಿಕ್ಕರ್ ಮತ್ತು ಫ್ರಾನ್ಸಿಸ್ ಡಿ’ಸೋಜ ಮೃತಪಟ್ಟಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರಾದ ಸುಭಾಶ್ ಶಿರೋಡ್ಕರ್ ಮತ್ತು ದಯಾನಂದ ಸೋಪ್ಟೆ ರಾಜೀನಾಮೆ ನೀಡಿರುವುದರಿಂದ ಸದನದ ಬಲ 36ಕ್ಕೆ ಇಳಿದಿದೆ. ಸದನದಲ್ಲಿ ಏಕೈಕ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದರೆ, ಎನ್‌ಸಿಪಿ ಒಂದು ಸ್ಥಾನವನ್ನು ಹೊಂದಿದೆ. ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ರವಿವಾರ ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸಾವಂತ್ ಮುಖ್ಯಮಂತ್ರಿಯಾಗಿ ಹಾಗೂ ಇತರ 12 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News