ಮೋದಿ, ಅಮಿತ್ ಶಾ ತಾಕತ್ತಿದ್ದರೆ ನನ್ನೊಂದಿಗೆ ಸಂಸ್ಕೃತ ಶ್ಲೋಕ ಪಠಿಸಲಿ: ಮಮತಾ ಬ್ಯಾನರ್ಜಿ ಸವಾಲು

Update: 2019-03-20 09:59 GMT

ಕೊಲ್ಕತ್ತಾ, ಮಾ.20: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಾಕತ್ತಿದ್ದರೆ, ನನ್ನೊಂದಿಗೆ ಸಂಸ್ಕೃತ ಶ್ಲೋಕಗಳನ್ನು ಪಠಿಸುವ ಸವಾಲು ಸ್ವೀಕರಿಸಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಆಚರಣೆಗಳಿಗೆ ಕೂಡಾ ಅಪಾಯ ಇದೆ ಎಂಬ ವಿರೋಧ ಪಕ್ಷಗಳ ಟೀಕೆಗಳನ್ನು ಅವರು ಬಲವಾಗಿ ಅಲ್ಲಗಳೆದರು.

“ಹಣೆಯಲ್ಲಿ ತಿಲಕ ಇಟ್ಟುಕೊಂಡ ಮಾತ್ರಕ್ಕೆ ಅದು ಆರಾಧನೆ ಎನಿಸುವುದಿಲ್ಲ. ಅಮಿತ್‍ ಬಾಬು ಮತ್ತು ಮೋದಿಬಾಬು ನಮ್ಮೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಸ್ಪರ್ಧೆಗೆ ಬರಲಿ. ಸಂಸ್ಕೃತ ಶ್ಲೋಕದ ಬಗ್ಗೆ ಯಾರಿಗೆ ಆಳವಾದ ಜ್ಞಾನ ಇದೆ ಎನ್ನುವುದು ಗೊತ್ತಾಗಲಿ” ಎಂದು ಸವಾಲು ಹಾಕಿದರು.

ದುರ್ಗಾಮೂರ್ತಿ ಮುಳುಗಿಸಲು ಅವಕಾಶ ನೀಡಲಿಲ್ಲ ಮತ್ತು ಶಾಲೆಗಳಲ್ಲಿ ಸರಸ್ವತಿ ಪೂಜೆಗಳಿಗೆ ಮಮತಾ ಬ್ಯಾನರ್ಜಿ ಅವಕಾಶ ನೀಡಿಲ್ಲ ಎಂದು ಬಿಜೆಪಿ ಆಪಾದಿಸಿರುವ ಹಿನ್ನೆಲೆಯಲ್ಲಿ ಮಮತಾ ಈ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪೂಜೆಗಳಿಗೂ ಅಪಾಯವಿದೆ ಎಂದು ಮೋದಿ ಆಪಾದಿಸಿದ್ದರು.

ಹೋಳಿ ಹಬ್ಬಕ್ಕೆ ಪೂರ್ವಭಾವಿಯಾಗಿ ಅಂತರರಾಷ್ಟ್ರೀಯ ಮಾರ್ವಾಡಿ ಒಕ್ಕೂಟ ಆಯೋಜಿಸಿದ್ದ ಸಂತೋಷಕೂಟದಲ್ಲಿ ಮಾತನಾಡಿದ ಮಮತಾ, "ದೆಹಲಿಯ ಕೆಲ ಮಂದಿ ನಮ್ಮತ್ತ ಬೆರಳು ತೋರಿಸುತ್ತಿದ್ದಾರೆ. ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ನಾವು ದುರ್ಗಾಪೂಜೆ ಆಚರಿಸುವುದೂ ಇಲ್ಲ ಎಂದು ಹೇಳುತ್ತಾರೆ. ಹಲವು ವರ್ಷಗಳಿಂದ ನಾವು ಅದನ್ನು ಆಚರಿಸಿಕೊಂಡು ಬಂದಿದ್ದೇವೆ. ನವರಾತ್ರಿ, ಚಾತ್ ಪೂಜೆ, ಗಣಪತಿ ವಂದನೆಯಂಥ ಧಾರ್ಮಿಕ ಕಾರ್ಯಕ್ರಮಗಳನ್ನು ನಾವು ಎತ್ತಿ ಹಿಡಿದಿದ್ದೇವೆ" ಎಂದು ಪ್ರತಿಪಾದಿಸಿದರು. ದಕ್ಷಿಣೇಶ್ವರ ದೇವಾಲಯದ ಆಧುನೀಕರಣ ಸೇರಿದಂತೆ ರಾಜ್ಯಾದ್ಯಂತ ಕೈಗೊಂಡಿರುವ ದೇಗುಲ ಪುನರುಜ್ಜೀವನ ಕಾರ್ಯಗಳನ್ನು ಅವರು ಉಲ್ಲೇಖಿಸಿದರು.

ರಾಮಮಂದಿರ ವಿಚಾರ ಪ್ರಸ್ತಾಪಿಸಿ, "ಇದುವರೆಗೆ ಅವರು ಎಷ್ಟು ಮಂದಿರ ಕಟ್ಟಿದ್ದಾರೆ?, ರಾಮಮಂದಿರವನ್ನೂ ಕಟ್ಟಲು ಸಾಧ್ಯವಾಗಲಿಲ್ಲ. ಅವರು ಕೇವಲ ಚುನಾವಣಾ ಭರವಸೆಗಳನ್ನಷ್ಟೇ ನೀಡುತ್ತಾರೆ" ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News