ಚುನಾವಣೆ ಹೊಸ್ತಿಲಲ್ಲಿ ಮೋದಿ ಕುರಿತ ಚಿತ್ರ ಬಿಡುಗಡೆ; ನೀತಿ ಸಂಹಿತೆ ಉಲ್ಲಂಘನೆಯೇ?

Update: 2019-03-20 11:00 GMT

ಹೊಸದಿಲ್ಲಿ, ಮಾ.20: ವಿವೇಕ್ ಒಬೆರಾಯ್ ನಾಯಕ ನಟನಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಜೀವನವನ್ನಾಧರಿಸಿದ  ಚಲನಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದ್ದು, ಎಪ್ರಿಲ್ 5ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 2019ರ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 11ರಂದು ನಡೆಯುವ ಹಿನ್ನೆಲೆಯಲ್ಲಿ ಈ ನಿರ್ಧಾರ ಹಲವರ ಕಣ್ಣು ಕೆಂಪಾಗಿಸಿದೆ.

ಚಿತ್ರಕ್ಕೆ "ಪಿಎಂ ನರೇಂದ್ರ ಮೋದಿ" ಎಂದೇ ಹೆಸರಿಸಲಾಗಿದ್ದು, ಪ್ರಧಾನಿಯವರ ರಾಜಕೀಯ ವೃತ್ತಿಯ ಮಜಲುಗಳನ್ನು ಇದು ಬಿಂಬಿಸಿದೆ ಎನ್ನಲಾಗಿದೆ. ಇದು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಪ್ರಚಾರದ ವಸ್ತುವಾಗಿಯೂ ಇದು ಬಳಕೆಯಾಗಹುದು ಎನ್ನಲಾಗುತ್ತಿದೆ. ಅದರೆ ಹಲವು ಮಂದಿ ಮಾಜಿ ಚುನಾವಣಾ ಆಯುಕ್ತರ ಪ್ರಕಾರ, ಕಾನೂನಾತ್ಮಕವಾಗಿ ಚಿತ್ರ ಬಿಡುಗಡೆ ತಪ್ಪಲ್ಲ; ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ.

ಈ ಚಿತ್ರ ಹಾಗೂ ಈ ವರ್ಷ ಬಿಡುಗಡೆಯಾದ ಇಂಥ ಕೆಲ ಚಿತ್ರಗಳು ರಾಜಕೀಯ ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದ್ದವು. ಇದು ದೊಡ್ಡ ಪಕ್ಷಗಳಿಗೆ ಹಾಗೂ ನಾಯಕರಿಗೆ ಅರ್ಹವಲ್ಲದ ಪ್ರಯೋಜನ ಒದಗಿಸುತ್ತವೆ ಎನ್ನುವುದು ಇವರ ಆಕ್ಷೇಪ. ಇದರ ಹಣ ಚುನಾವಣಾ ವೆಚ್ಚದ ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದು ಅವರ ದೂರು.

ರಾಜಕೀಯ ವಿರೋಧಿಗಳನ್ನು ಚಿತ್ರಗಳ ಮೂಲಕವೂ ಗುರಿ ಮಾಡಬಹುದಾಗಿದೆ. ಉದಾಹರಣೆಗೆ ದ ತಾಷ್ಕೆಂಟ್ ಫೈಲ್ಸ್ ಚಿತ್ರ. ನಾಸಿರುದ್ದೀನ್ ಶಾ ನಟನೆಯ ಈ ಚಿತ್ರವನ್ನು ಬಿಜೆಪಿ ನಿಷ್ಠ ವಿವೇಕ್ ಅಗ್ನಿಹೋತ್ರಿ ನಿರ್ಮಿಸಿದ್ದು, 1965ರಲ್ಲಿ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದ ಚಿತ್ರಣವನ್ನು ಬಿಂಬಿಸುವಂತದ್ದು. ಶಾಸ್ತ್ರೀಜಿ ಸಾವು ಒಂದು ಪಿತೂರಿ ಹಾಗು ಇದರಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವುದು ಶಾಸ್ತ್ರಿ ಕುಟುಂಬದ ಆರೋಪ. ಈ ಚಿತ್ರ ಏಪ್ರಿಲ್ 12ರಂದು ಬಿಡುಗಡೆಯಾಗಲಿದೆ.

ಚುನಾವಣೆಯ ವರ್ಷವಾದ ಈ ವರ್ಷ ವ್ಯಕ್ತಿಚಿತ್ರ ಆಥವಾ ಇತ್ತೀಚಿನ ಐತಿಹಾಸಿಕ ಘಟನೆಗಳನ್ನು ಒಳಗೊಂಡ ಮೂರು ಚಿತ್ರಗಳು ಬಿಡುಗಡೆಯಾಗಿವೆ. ‘ಉರಿ: ಸರ್ಜಿಕಲ್ ಸ್ಟ್ರೈಕ್’, ‘ದ ಆ್ಯಕ್ಸಿಡೆಂಟಲ್ ಪ್ರೈಮ್‍ಮಿನಿಸ್ಟರ್’ ಮತ್ತು ‘ಠಾಕ್ರೆ’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News