ಕೋಟ ಠಾಣೆಯಿಂದ ಅಕ್ರಮ ಮರಳುಗಾರಿಕೆ ಆರೋಪಿ ಪರಾರಿ!

Update: 2019-03-21 08:22 GMT


ಕೋಟ, ಮಾ.21: ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಆರೋಪಿಯೊಬ್ಬ ಕೋಟ ಪೊಲೀಸ್ ಠಾಣೆಯಲ್ಲಿ ಮಾ.20ರಂದು ಅಪರಾಹ್ನ 3:30ರ ಸುಮಾರಿಗೆ ಪೊಲೀಸರನ್ನು ತಳ್ಳಿಹಾಕಿ ತಪ್ಪಿಸಿಕೊಂಡು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಸದ್ಯ ಹಂಗಾರಕಟ್ಟೆಯ ಕೆಮಿಕಲ್ ಫ್ಯಾಕ್ಟರಿ ಬಳಿಯ ನಿವಾಸಿ, ಟೆಂಪೊ ಚಾಲಕ ಮಂಜು ಪರಾರಿಯಾಗಿರುವ ಆರೋಪಿ. ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಠಾಣಾಧಿಕಾರಿ ರಫೀಕ್ ಎಂ., ಐರೋಡಿ ಪಿಡಿಒ ಸುಭಾಸ್ ಖಾರ್ವಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಜೊತೆ ಬುಧವಾರ ಮುಂಜಾವ 5:30ರ ಸುಮಾರಿಗೆ ಹಂಗಾರಕಟ್ಟೆ ಸೀತಾನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಿದ್ದರು.

ಈ ವೇಳೆ 407 ಟೆಂಪೋ ವಾಹನಕ್ಕೆ ಮರಳು ತುಂಬಿಸುತ್ತಿರುವುದು ಕಂಡುಬಂದಿದ್ದು, ಪೊಲೀಸರನ್ನು ನೋಡಿದ ಅಶೋಕ ಪೂಜಾರಿ ಹಾಗೂ ಸಂತೋಷ ಎಂಬವರು ಸ್ಥಳದಿಂದ ತಪ್ಪಿಸಿಕೊಂಡಿದ್ದರು. ಸ್ಥಳದಲ್ಲಿದ್ದ 407 ಟೆಂಪೋ ಚಾಲಕ ಮಂಜು ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದರು. 5,000 ರೂ. ವೌಲ್ಯದ ಒಂದು 1 ಟನ್ ಮರಳು ಸಹಿತ ಅಶೋಕ್ ಪೂಜಾರಿ ಎಂಬವರ ಟೆಂಪೊವನ್ನೂ ಪೊಲೀಸರು ವಶಪಡಿಸಿ ಕೊಂಡಿದ್ದರು.

ಠಾಣೆಯಲ್ಲಿ ವಿಧಿಬದ್ದ ಕಸ್ಟಡಿಯಲ್ಲಿದ್ದ ಮಂಜು ಎಎಸ್ಸೈ ರಫೀಕ್ ಹೊರಗೆ ಹೋಗಿದ್ದ ಸಂದರ್ಭ ಭದ್ರತೆಗಾಗಿ ನೇಮಿಸಿದ್ದ ಹೆಡ್‌ಕಾನ್ ಸ್ಟೇಬಲ್ ರಾಮ ದೇವಾಡಿಗ ಎಂಬವರನ್ನು ತಳ್ಳಿ ತಪ್ಪಿಸಿ ಕೊಂಡು ಪೊಲೀಸ್ ಠಾಣೆಯಿಂದ ಓಡಿ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ರಾಮ ದೇವಾಡಿಗ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News