ಮುಡಿಪು: ಅಶ್ಫಕ್ ಅಹ್ಮದ್ ಮ್ಯಾಗೇರಿಗೆ ಸನ್ಮಾನ

Update: 2019-03-21 12:59 GMT

ಕೊಣಾಜೆ: ಮುಡಿಪುವಿನ ಕುರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿರುವ ಅಶ್ಫಕ್ ಅಹ್ಮದ್ ಎ ಮ್ಯಾಗೇರಿ ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕ ವರ್ಗ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಬುಧವಾರ ನಡೆಯಿತು.

ಸಮಾರಂಭವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಎ.ಎಂ ಖಾನ್ ಉದ್ಘಾಟಿಸಿ,  ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ವಿಭಾಗದಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ವೃತ್ತಿಯಿಂದ ನಿವೃತ್ತರಾಗುತ್ತಿರುವ ಸನ್ಮಾನಿತರ ವ್ಯಕ್ತಿತ್ವ, ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದುದು ಎಂದರು.

ಗ್ರಾಮೀಣ ಪ್ರದೇಶದಲ್ಲಿರುವ ಈ ಸರಕಾರಿ ಪದವಿಪೂರ್ವ ಕಾಲೇಜನ್ನು ತಮ್ಮ ದೂರದೃಷ್ಟಿ, ಸಂಘಟನಾತ್ಮಕ ಶಕ್ತಿ, ಬದ್ಧತೆ, ಪರಿಶ್ರಮದ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸಿದ ಇವರ ಈ ಪರಿಶ್ರಮ ಶ್ಲಾಘನೀಯವೆಂದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆಯು ತ್ತಿರುವ ಇಂದಿನ ವಿದ್ಯಾರ್ಥಿಗಳು ಬದಲಿಗೆ ಮಾನವೀಯ ಸಂಬಂಧಗಳನ್ನು, ಉನ್ನತ ಮೌಲ್ಯಗಳನ್ನು, ಗುರು ಹಿರಿಯರನ್ನು ಗೌರವಿಸುವ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕೆಂದು ಕರೆಯಿತ್ತರು. ವೃತ್ತಿ ರಂಗಕ್ಕೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಲ್ಲರ ಮಜಲು ಶಂಕರಭಟ್ ಅವರು, ಒಂದು ಪೆನ್ನು, ಒಬ್ಬ ಶಿಕ್ಷಕ, ಒಂದು ಪುಸ್ತಕ ಜಗತ್ತನ್ನೇ ಬದಲಿಸಬಹುದು. ಮೌಲ್ಯಗಳು ಪತನಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಅಷ್ಪಾಕ್ ಅಹ್ಮದ್ ಎ ಮ್ಯಾಗೇರಿ ಇವರ ಮೌಲ್ಯಗಳು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇಲ್ಲಿನ ಆಂಗ್ಲಭಾಷಾ ಉಪನ್ಯಾಸಕರಾದ ಶ್ರೀಧರ ಅಡಿಗ ಅವರು ಅಭಿನಂದನಾ ಭಾಷಣ ಮಾಡಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಷ್ಪಾಕ್ ಅಹ್ಮದ್ ಎ ಮ್ಯಾಗೇರಿ ಅವರು, ಕಲಿಕೆಗೆ ವಯಸ್ಸಿನ ಹಂಗಿಲ್ಲ. ತಾವು ಹಿರಿಯರಿಂದಷ್ಟೇ ಅಲ್ಲ ಕಿರಿಯರಿಂದಲೂ ಹಲವು ವಿಚಾರಗಳನ್ನು ಕಲಿತಿರುವುದಾಗಿ ಹೇಳಿದರು. ತಮ್ಮ ಸೇವಾ ಅವಧಿಯಲ್ಲಿ ಬೆಂಬಲ ನೀಡಿದ ಕಾಲೇಜು ಅಭಿವೃದ್ದಿ ಸಮಿತಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವೃಂದ, ವಿದ್ಯಾರ್ಥಿಗಳಿಗೂ ಊರ ಗಣ್ಯರಿಗೂ ಕೃತಜ್ಞತೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಶಾಹಿನ್, ದಕ್ಷಿಣ ಕನ್ನಡ ಜಿಲ್ಲಾ ಪ್ರಾಂಶುಪಾಲರ ಸಂಘದ ಕೋಶಾಧಿಕಾರಿಗಳಾದ ವಿಠ್ಠಲ್, ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಉಮ್ಮರ್ ಫಜೀರ್, ಲಯನ್ ದೇವದಾಸ ಭಂಡಾರಿ, ಶೀನಶೆಟ್ಟಿ, ಪ್ರಶಾಂತ್ ಕಾಜವ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರಿಧರ ರಾವ್, ಉಪಪ್ರಾಂಶುಪಾಲರಾದ ಪ್ರೇಮಪ್ರಭ, ನಿವೃತ್ತ ಉಪಪ್ರಾಂಶುಪಾಲರಾದ ಬಸವರಾಜ ಪಲ್ಲಕ್ಕಿ, ಮುಖಂಡರಾದ ಮಮತಾಗಟ್ಟಿ, ಚಂದ್ರಹಾಸ ಕರ್ಕೇರ, ಸಂತೋಷ್ ಕುಮಾರ್ ರೈ ಬೋಳಿಯಾರು, ಅಬ್ದುಲ್ ಜಲೀಲ್, ಮೂಸ ಕುಂಞಿ, ಅಂದು ಕುಂಞಿ, ನಾಸೀರ್, ಇಬ್ರಾಹಿಂ ನಡುಪದವು ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ರಾಘವೇಂದ್ರ ರಾವ್ ಸ್ವಾಗತಿಸಿದರು. ಶರಣ್ಯ ರೈ ವಂದಿಸಿದರು. 

ಆಂಗ್ಲಭಾಷಾ ಉಪನ್ಯಾಸಕ ಅಂಬಾ ಪ್ರಸಾದ್ ಎನ್, ಕನ್ನಡ ಉಪನ್ಯಾಸಕರಾದ ಡಾ.ಲತಾ ಜಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಸರಳಾದೇವಿ ಪಿ ಸನ್ಮಾನ ಪತ್ರ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News