ಪ್ರಕೃತಿ ಮೇಲೆ ಮಾನವರಿಂದ ಒತ್ತಡ: ನ್ಯಾ. ಸತ್ಯನಾರಾಯಣಾಚಾರ್ಯ

Update: 2019-03-21 13:03 GMT

ಮಂಗಳೂರು, ಮಾ.21: ಕಾಡಿನ ಜೀವಸಂಕುಲದಿಂದ ಮನುಷ್ಯನ ಬದುಕು ನೆಮ್ಮದಿಯಿಂದ ಇದೆ ಹೊರತು, ಮನುಷ್ಯನಿಂದ ಜೀವರಾಶಿಗಳಲ್ಲ. ಆದರೆ, ಇಂದು ಮಾನವನ ಹಸ್ತಕ್ಷೇಪದಿಂದ ಪ್ರಕೃತಿಯೇ ಒತ್ತಡದಲ್ಲಿದೆ ಎಂದು ದ.ಕ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೂರು ಸತ್ಯ ನಾರಾಯಣಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಶ್ರೀಗೋಕರ್ಣನಾಥೇಶ್ವರ ಬಿ.ಎಡ್. ಕಾಲೇಜು ಸಭಾಂಗಣದಲ್ಲಿ ಗುರುವಾರ ‘ಅಂತಾರಾಷ್ಟ್ರೀಯ ಅರಣ್ಯ ದಿನ ಮತ್ತು ವಿಶ್ವ ಗುಬ್ಬಚ್ಚಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆಲ್ಲಾ ನಮ್ಮ ಮನೆಯ ಸುತ್ತಮುತ್ತ ಕಾಣ ಸಿಗುತ್ತಿದ್ದ ಗುಬ್ಬಚ್ಚಿಗಳು ಇಂದು ಅಗೋಚರವಾಗಿವೆ. ಅವುಗಳಿಗಾಗಿಯೂ ಇಂದು ದಿನಾಚರಣೆ ನಡೆಸುತ್ತಿ ರುವುದು ಶೋಚನೀಯ. ನಾಡಿಗೆ ಪ್ರಾಣಿಗಳು ಬರುತ್ತಿವೆ ಎಂದು ಕೆಟ್ಟ ಆಲೋಚನೆಯಿಂದ ಮನುಷ್ಯ ಕಾಡಿಗೆ ಬೆಂಕಿ ಇಡುತ್ತಿದ್ದಾನೆ ಇಂದು ನಮ್ಮ ದುರಂತ ಎಂದು ಅವರು ಹೇಳಿದರು.

ಬಂಡೀಪುರದಲ್ಲಿ ಕಾಡಿಗೆ ಬೆಂಕಿ ಇಟ್ಟವರನ್ನು ರಕ್ಷಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಮಾನವನ ದುರಾಸೆ, ಪ್ರಕೃತಿಯ ನಾಶಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.

ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್.ನೆಟಾಲ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ನ್ಯಾಯಾಧೀಶ ಎ.ಜಿ. ಗಂಗಾಧರ, ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಜಯವಿಕ್ರಮ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕ್ಕಲನ್ ವಿ., ಶಿವಭಕ್ತಿ ಸಂಘದ ಶೇಖರ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಜೆಸಿಐನ ಡಾ.ರಾಘವೇಂದ್ರ ಹೊಳ್ಳ, ಕಾಲೇಜಿನ ಪ್ರಾಂಶುಪಾಲರಾದ ಡಾ.ದೀಪ್ತಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಅರಣ್ಯ ಇಲಾಖೆ ಮಂಗಳೂರು ವಿಭಾಗ, ಜೆ.ಸಿ.ಐ. ಮಂಗಳೂರು ಸಾಮ್ರಾಟ್ ಮತ್ತುಗೋಕರ್ಣನಾಥೇಶ್ವರ ಬಿ.ಎಡ್. ಕಾಲೇಜು ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುಬ್ಬಚ್ಚು ಗೂಡು ವಿತರಣೆ

ಗುಬ್ಬಚ್ಚಿಗಳನ್ನು ಸಂರಕ್ಷಿಸುವ ಸಲುವಾಗಿ ಇಂದು ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಮಣ್ಣಿನಿಂದ ಮಾಡಿದ ಗುಬ್ಬಚ್ಚಿ ಗೂಡು ಮತ್ತು ಗಿಡಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News