ವಿನಾಯಕ ಬಾಳಿಗ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿಕೊಡಬೇಕು: ಪ್ರೊ. ನರೇಂದ್ರ ನಾಯಕ್‌

Update: 2019-03-21 14:51 GMT

ಮಂಗಳೂರು, ಮಾ. 21: ವಿನಾಯಕ ಬಾಳಿಗ ಕೊಲೆ ಪ್ರಕರಣ ನಡೆದು ಮೂರು ವರ್ಷ ಸಂದರೂ ಅವರನ್ನು ಕೊಲೆಗೈದವರಿಗೆ ಕಠಿಣ ಶಿಕ್ಷೆಯಾಗಿಲ್ಲ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿಕೊಡಬೇಕು ಎನ್ನುವ ಬೇಡಿಕೆಗೆ ಪುರಸ್ಕಾರ ದೊರೆತಿಲ್ಲ. ಅದನ್ನು ಸರಕಾರ ಪರಿಗಣಿಸಬೇಕು ಎಂದು ವಿಚಾರವಾದಿಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಆಗ್ರಹಿಸಿದ್ದಾರೆ.

ನಗರದ ವೆಂಕಟ್ರಮಣ ದೇವಸ್ಥಾನದ ಬಳಿಯಿಂದ ವಿನಾಯಕ ಬಾಳಿಗ ಅವರ ಮನೆಯವರೆಗೆ ದೇಶ ಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಹಮ್ಮಿಕೊಂಡ ಮೆರವಣಿಗೆ ಮತ್ತು ಬಳಿಕ ವಿನಾಯಕ ಬಾಳಿಗ ಅವರ ನಿವಾಸದ ಮುಂಭಾಗದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಕೊಲೆ ನಡೆದ ಮಾರ್ಚ್ 21ಕ್ಕೆ ಮೂರು ವರ್ಷ ಕಳೆದಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ.ಅದೂ ಇನ್ನೂ ಮುಂದುವರಿಯಲಿದೆ. ಆದರೆ ಈ ಪ್ರಕರಣದ ತನಿಖೆ ಸಮರ್ಪಕವಾಗಿ ಆಗಬೇಕಾದರೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎನ್ನುವ ಒತ್ತಾಯವನ್ನು ಸರಕಾರದ ಮುಂದೆ ಮಾಡುತ್ತಾ ಬಂದರೂ ಅದಕ್ಕೆ ಇದೂವರೆಗೂ ಸೂಕ್ತವಾದ ಉತ್ತರ ದೊರೆತಿಲ್ಲ. ವಿನಾಯಕ ಬಾಳಿಗ ಅವರು ಸಾರ್ವಜನಿಕ ಆಸ್ತಿಯ ದುರುಪಯೋಗ, ಕಾನೂನು ಉಲ್ಲಂಘನೆ, ದೇವಸ್ಥಾನಗಳಲ್ಲಿ ಅವ್ಯವಹಾರ ನಡೆಸುವವರ ವಿರುದ್ಧ ಹೋರಾಟ ನಡೆಸುತ್ತಾ ಬಂದವರು. ಅದನ್ನು ಸಹಿಸದವರಿಂದ ಕೊಲೆಯಾಗಿದೆ. ಅವರ ನಿಧನದಿಂದ ಹೋರಾಟ ನಿಲ್ಲಬಾರದು ಅದನ್ನು ಮುಂದುವರಿಸಬೇಕಾಗಿದೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ ಕಾರಣ ವಿನಾಯಕ ಬಾಳಿಗ ಅವರ ಕೊಲೆಯಾಗಿದೆ ಮತ್ತು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿನಾಯಕ ಬಾಳಿಗರ ಹೋರಾಟದ ನೆನಪು ನಮ್ಮ ಸಮಾಜದಿಂದ ಅಳಿಸಿ ಹೋಗಬಾರದು ಅವರ ಕುಟುಂಬದವರಿಗೆ ನೈತಿಕ ಬೆಂಬಲ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡ ದೇವದಾಸ ಮಾತನಾಡುತ್ತಾ, ಪ್ರಕಣದ ನೈಜ ದುಷ್ಕರ್ಮಿಗಳ ಪತ್ತೆಗೆ ವಿಶೇಷ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದರು.

ಮನಶಾಸ್ತ್ರಜ್ಞ ಡಾ. ಪಿವಿ.ಭಂಡಾರಿ ಮಾತನಾಡುತ್ತಾ ವಿನಾಯಕ ಬಾಳಿಗ ಅನ್ಯಾಯದ ವಿರುದ್ಧ ಯಾವುದೇ ಮುಲಾಜಿಲ್ಲದೆ ಹೋರಾಟ ನಡೆಸಿದ ನೇರ ನಡೆ ನುಡಿಯ ವ್ಯಕ್ತಿ. ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿದ್ದ ಹೋರಾಟ ನಿರಂತರವಾಗಬೇಕಾಗಿದೆ ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು.

ಬಾಳಿಗ ಕುಟುಂಬದ ಸದಸ್ಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ, ಉಷಾ ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News