ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಪ್ರಮೋದ್ ಜೆಡಿಎಸ್‌ನಿಂದ ಸ್ಪರ್ಧೆ, ಬಿಜೆಪಿಯಿಂದ ಶೋಭಾ ಕರಂದ್ಲಾಜೆ

Update: 2019-03-21 16:25 GMT
ಪ್ರಮೋದ್ ಮಧ್ವರಾಜ್ - ಶೋಭಾ ಕರಂದ್ಲಾಜೆ

ಉಡುಪಿ, ಮಾ.21: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಎರಡು ದಿನಗಳ ಮೀನಾಮೇಷದ ಬಳಿಕ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಟಿಕೇಟ್ ನೀಡಲು ಬಿಜೆಪಿ ನಿರ್ಧರಿಸಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ತಿಳಿಸಿದ್ದು, ಪ್ರಮೋದ್, ಜೆಡಿಎಸ್ ಸದಸ್ಯರಾಗಿ ಸ್ಪರ್ಧಿಸುವರೇ ಅಥವಾ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುವರೇ ಎಂಬ ಪ್ರಶ್ನೆಗೆ ಬೋಜೇಗೌಡ ಉತ್ತರಿಸಲಿಲ್ಲ.

ಮತ್ತೆ ಶೋಭಾ

ಎರಡು ದಿನಗಳ ನಿಗೂಢತೆಯ ಬಳಿಕ, ಶೋಭಾ ಕರಂದ್ಲಾಜೆ ಉಡುಪಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಪಕ್ಷ ಹಸಿರು ನಿಶಾನೆ ತೋರಿಸಿದೆ. ಸಂಸದೆಯಾಗಿ ಶೋಭಾ ಅವರ ಸಾಧನೆ ಕಾರ್ಯಕರ್ತರಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ‘ಗೋ ಬ್ಯಾಕ್ ಶೋಭಾ’ ಅಭಿಯಾನವನ್ನೂ ನಡೆಸಲಾಗಿತ್ತು. ಇವುಗಳನ್ನು ತಳ್ಳಿ ಹಾಕಿರುವ ಪಕ್ಷದ ಹೈಕಮಾಂಡ್, ಶೋಭಾಗೆ ಇನ್ನೊಂದು ಅವಕಾಶವನ್ನು ನೀಡಲು ನಿರ್ಧರಿಸಿದೆ.

ಶೋಭಾ ಅವರು ಮಾ. 26ರಂದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ನಿಕಟವರ್ತಿ ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News