ವಿದ್ಯಾರ್ಥಿಗಳ ಜೊತೆ ರಾಹುಲ್ ಸಂವಾದ ನೀತಿ ಸಂಹಿತೆಯ ಉಲ್ಲಂಘನೆಯಲ್ಲ: ಚು.ಆಯೋಗ

Update: 2019-03-21 16:02 GMT

ಹೊಸದಿಲ್ಲಿ,ಮಾ.21: ಚೆನ್ನೈಯ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಸಂವಾದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ. ಆದರೆ ಆಯೋಗ ರಾಹುಲ್ ಗಾಂಧಿ ಭಾಷಣದ ವರದಿಯನ್ನು ಕೇಳಿದೆ.

ಚೆನ್ನೈಯ ಸ್ಟೆಲ್ಲ ಮೆರಿಸ್ ಮಹಿಳಾ ಕಾಲೇಜಿನಲ್ಲಿ ಮಾರ್ಚ್ 13ರಂದು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ಕಾಲೇಜು ಮಂಡಳಿ ಅಗತ್ಯ ಅನುಮತಿಯನ್ನು ಪಡೆದುಕೊಂಡಿತ್ತು. ಹಾಗಾಗಿ ಇಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಸ್ಥಳೀಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ ಎಂದು ತಮಿಳು ನಾಡು ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಾಹೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಯಾವ ರೀತಿಯ ಭಾಷಣ ಮಾಡಿದ್ದಾರೆ. ಅವರ ಭಾಷಣದ ವಿಷಯ ಏನಾಗಿತ್ತು ಎಂಬುದನ್ನು ತಿಳಿಯಲು ಈ ಬಗ್ಗೆ ವರದಿಯನ್ನು ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಿದ್ದೇನೆ ಎಂದು ಸಾಹೂ ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲು ರಾಹುಲ್ ಗಾಂಧಿಗೆ ಕಾಲೇಜು ಅನುಮತಿ ನೀಡಿದ್ದಾದರೂ ಹೇಗೆ ಎಂಬ ಬಗ್ಗೆ ತನಿಖೆಗೆ ತಮಿಳು ನಾಡು ಸರಕಾರ ಆದೇಶಿಸಿತ್ತು. ಸಂವಾದದಲ್ಲಿ ರಾಹುಲ್ ಗಾಂಧಿ ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಶೇ.33 ಮೀಸಲಾತಿ ಭರವಸೆಯನ್ನು ನೀಡಿದ್ದಾರೆ ಮತ್ತು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಫೇಲ್ ಒಪ್ಪಂದದ ಬಗ್ಗೆಯೂ ಮಾತನಾಡಿರುವ ಅವರು ಯುದ್ಧವಿಮಾನ ಖರೀದಿಗೆ ಸೂಚಿಸಲಾಗಿರುವ ಮೊತ್ತದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News