ಜಮ್ಮು ಕಾಶ್ಮೀರ: ಪಾಕ್ ಶೆಲ್ ದಾಳಿಗೆ ಭಾರತದ ಯೋಧ ಬಲಿ

Update: 2019-03-21 17:45 GMT

ಜಮ್ಮು, ಮಾ.21: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಬಳಿ ಪಾಕಿಸ್ತಾನ ಪಡೆ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿ ನಡೆಸಿರುವ ಗುಂಡಿನ ದಾಳಿಯಲ್ಲಿ ಓರ್ವ ಸೇನಾ ಯೋಧ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗುರುವಾರ ಪಾಕ್ ಪಡೆಗಳು ಭಾರತದ ಮುಂಚೂಣಿಯ ಸೇನಾ ನೆಲೆಗಳ ಮೇಲೆ ಮೋರ್ಟರ್ ಬಾಂಬ್ ದಾಳಿ ನಡೆಸಿದ್ದು, ಈ ಸಂದರ್ಭ ಭಾರತದ ಯೋಧ ಮೃತಪಟ್ಟಿದ್ದಾರೆ. ಮೃತಪಟ್ಟ ಯೋಧನನ್ನು ಜಮ್ಮು ಉಧಾಂಪುರ ನಿವಾಸಿ 24 ವರ್ಷದ ರೈಫಲ್‌ಮ್ಯಾನ್ ಯಶ್‌ಪಾಲ್ ಎಂದು ಗುರುತಿಸಲಾಗಿದೆ ಎಂದು ಸೇನಾಪಡೆಯ ವಕ್ತಾರರು ತಿಳಿಸಿದ್ದಾರೆ.

ಪಾಕ್ ಪಡೆಗಳು ಜನವರಿಯ ಬಳಿಕ ಇದುವರೆಗೆ 110 ಬಾರಿ ಗಡಿ ನಿಯಂತ್ರಣಾ ರೇಖೆಯ ಬಳಿ ಕದನ ವಿರಾಮ ಉಲ್ಲಂಘಿಸಿವೆ. ಸೋಮವಾರ ರಾತ್ರಿ ಪಾಕ್ ಪಡೆಗಳು ಅಖ್ನೂರ್ ಹಾಗೂ ಸುಂದರ್‌ಬನಿ ವಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. 2018ರಲ್ಲಿ ಪಾಕಿಸ್ತಾನದ ಪಡೆಗಳು ಒಟ್ಟು 2,936 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು ಕಳೆದ 15 ವರ್ಷಕ್ಕೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News