ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿರಿಯರ ಹಿಂದೇಟು

Update: 2019-03-21 17:58 GMT

ಹೊಸದಿಲ್ಲಿ, ಮಾ.21: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹರ್ಯಾಣದ ಹಲವು ಹಿರಿಯ ಮುಖಂಡರು ನಿರಾಸಕ್ತಿ ತೋರಿರುವ ಹಿನ್ನೆಲೆಯಲ್ಲಿ, ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಹರಸಾಹಸ ಪಡುವಂತಾಗಿದೆ.

ಸುದೀರ್ಘ ಕಾಲದಿಂದಲೂ ಹರ್ಯಾನ ಕಾಂಗ್ರೆಸ್ ಒಡೆದ ಮನೆಯಂತಾಗಿದ್ದು, ಪಕ್ಷದ ಮುಖಂಡರೊಳಗಿನ ಒಳಜಗಳ ಹೈಕಮಾಂಡ್‌ಗೆ ತಲೆನೋವು ತಂದಿತ್ತು. ಟಿಕೆಟ್ ಹಂಚಿಕೆ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಹೈಕಮಾಂಡ್ ಹರ್ಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ನೇತೃತ್ವದ 16 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಮಂಗಳವಾರ ದಿಲ್ಲಿಯಲ್ಲಿ ನಡೆದ ಈ ಸಮಿತಿಯ ಪ್ರಥಮ ಸಭೆಯಲ್ಲೇ ಪಕ್ಷದ ಮುಖಂಡರ ನಡುವಿನ ವೈಮನಸ್ಸು ಬಹಿರಂಗಗೊಂಡಿದ್ದು ಹಿರಿಯ ಮುಖಂಡರು ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಬೇಸರಗೊಂಡಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಕುಲ್‌ದೀಪ್ ಬಿಷ್ಣೋಯಿ ಸಭೆಗೆ ಗೈರು ಹಾಜರಾಗಿದ್ದರು.

ಪುತ್ರ ಭವ್ಯ ಬಿಷ್ಣೋಯ್‌ಗೆ ಹಿಸ್ಸಾರ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಕುಲ್‌ದೀಪ್ ಒತ್ತಾಯಿಸುತ್ತಿದ್ದಾರೆ. ಹಿರಿಯ ಮುಖಂಡರಾದ ನವೀನ್ ಜಿಂದಾಲ್, ಕುಲ್‌ದೀಪ್ ಶರ್ಮ ಹಾಗೂ ಕುಮಾರಿ ಸೆಲ್ಜ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಲಿಲ್ಲ. ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ. ಭೂಪಿಂದರ್ ಸಿಂಗ್ ಹೂಡಾ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಆಸಕ್ತರಾಗಿದ್ದಾರೆ. ಆದರೆ ಪಕ್ಷದ ಹೈಕಮಾಂಡ್ ಒತ್ತಾಯಿಸಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದೂ ಹೂಡ ತಿಳಿಸಿದ್ದಾರೆ. ಇದೀಗ ಹರ್ಯಾಣ ರಾಜ್ಯದ ಉಸ್ತುವಾರಿಯಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಝಾದ್ ಹರ್ಯಾಣದಲ್ಲಿ ಮಾರ್ಚ್ 26ರಿಂದ 30ರವರೆಗೆ ಬಸ್ ಯಾತ್ರೆಯನ್ನು ನಡೆಸುವ ಮೂಲಕ ಪಕ್ಷದೊಳಗಿನ ವಿವಿಧ ಬಣಗಳನ್ನು ಒಗ್ಗೂಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಫರೀದಾಬಾದ್‌ನಿಂದ ಆರಂಭವಾಗುವ ಬಸ್ ಯಾತ್ರೆ ಝಜ್ಜಾರ್‌ನಲ್ಲಿ ಸಮಾರೋಪಗೊಳ್ಳಲಿದೆ. ಬಸ್ಸಿನೊಳಗೆ ಪ್ರವೇಶಿಸುವಾಗ ಮುಖಂಡರು ಭಿನ್ನರಾಗಿದ್ದರೂ ಕೆಲ ದಿನದ ಬಳಿಕ ಬಸ್ಸಿನಿಂದ ಹೊರ ಬಂದಾಗ ಎಲ್ಲರೂ ಒಗ್ಗೂಡಿರುತ್ತಾರೆ. ಒಂದೇ ವೇದಿಕೆಯಲ್ಲಿ ಮಾತನಾಡಿ, ಒಂದೇ ತಟ್ಟೆಯಲ್ಲಿ ಊಟ ಮಾಡಿದ ಬಳಿಕ 20 ಮುಖಂಡರೂ ಒಂದಾಗುತ್ತಾರೆ ಎಂದು ಸೋಮವಾರ ಬಸ್ಸುಯಾತ್ರೆಯ ಘೋಷಣೆ ಮಾಡಿದ ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News