ದಿನಕರನ್ ಪತ್ರಿಕೆ ಮೇಲೆ ದಾಳಿ ಪ್ರಕರಣ: 9 ಮಂದಿಗೆ ಜೀವಾವಧಿ ಶಿಕ್ಷೆ

Update: 2019-03-21 18:00 GMT

ಚೆನ್ನೈ, ಮಾ.21: ತಮಿಳುನಾಡಿನ ಮಧುರೈಯಲ್ಲಿ 2007ರಲ್ಲಿ ದಿನಕರನ್ ಪತ್ರಿಕೆಯ ಕಚೇರಿಗಳ ಮೇಲಿನ ದಾಳಿ ಪ್ರಕರಣದಲ್ಲಿ 9 ಮಂದಿಗೆ ಮದ್ರಾಸ್ ಹೈಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ಘೋಷಿಸಿದೆ.

ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ದಾಳಿಯಲ್ಲಿ ಮೃತಪಟ್ಟ ಪತ್ರಿಕೆಯ ಮೂವರು ಸಿಬ್ಬಂದಿಗಳಾದ ಗೋಪಿನಾಥ್, ವಿನೋದ್ ಮತ್ತು ಮುತ್ತುರಾಮಲಿಂಗಮ್ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಶಿಕ್ಷೆಗೆ ಗುರಿಯಾದವರಲ್ಲಿ ಡಿಎಂಕೆಯ ಮಾಜಿ ಮುಖಂಡ ಎಂಕೆ ಅಳಗಿರಿಯ ಬೆಂಬಲಿಗ, 'ಅಟ್ಯಾಕ್ ಪಾಂಡಿ' ಎಂದೇ ಹೆಸರಾಗಿರುವ ವಿಪಿ ಪಾಂಡಿಯೂ ಸೇರಿದ್ದಾನೆ. ಅಲ್ಲದೆ ಪತ್ರಿಕಾ ಕಚೇರಿಯ ಮೇಲೆ ದಾಳಿ ನಡೆಸಿದ ಸಂದರ್ಭ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ ತೋರಿರುವ ಡಿವೈಎಸ್ಪಿಗೆ ಪ್ರತ್ಯೇಕವಾಗಿ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹಲವು ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ 2009ರಲ್ಲಿ ಸಿಬಿಐ ವಿಚಾರಣಾ ನ್ಯಾಯಾಲಯವು ಎಲ್ಲಾ 17 ಆರೋಪಿಗಳನ್ನೂ ಖುಲಾಸೆಗೊಳಿಸಿತ್ತು. ಸುದೀರ್ಘ ಸಮಯದ ಬಳಿಕ ಸಿಬಿಐ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಡಿಎಂಕೆಯ ಮುಖಂಡರಾಗಿದ್ದ ಕರುಣಾನಿಧಿಯ ಮೊಮ್ಮಕ್ಕಳಾದ ದಯಾನಿಧಿ ಮಾರನ್ ಹಾಗೂ ಕಲಾನಿಧಿ ಮಾರನ್ ಮಾಲಕತ್ವದ ದಿನಕರನ್ ಪತ್ರಿಕೆಯ ಕಚೇರಿಯ ಮೇಲೆ ಕರುಣಾನಿಧಿಯ ಹಿರಿಯ ಪುತ್ರ ಎಂಕೆ ಅಳಗಿರಿಯ ಬೆಂಬಲಿಗರು ದಾಳಿ ನಡೆಸಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸಮೀಕ್ಷಾ ಬರಹದಲ್ಲಿ ಕರುಣಾನಿಧಿಯ ಕಿರಿಯ ಪುತ್ರ ಎಂಕೆ ಸ್ಟಾಲಿನ್ ಜನಪ್ರಿಯತೆ ಶೇ.92ರಷ್ಟಿದ್ದರೆ, ಅಳಗಿರಿಯ ಜನಪ್ರಿಯತೆ ಕೇವಲ ಶೇ.2 ಮಾತ್ರ ಎಂದು ತಿಳಿಸಲಾಗಿತ್ತು.

ಕರುಣಾನಿಧಿಯ ರಾಜಕೀಯ ಉತ್ತರಾಧಿಕಾರಿ ಯಾರಾಗಬೇಕೆಂಬ ವಿಷಯದಲ್ಲಿ ಸ್ಟಾಲಿನ್ ಮತ್ತು ಅಳಗಿರಿ ಮಧ್ಯೆ ಹಗ್ಗಜಗ್ಗಾಟ ತಾರಕಕ್ಕೇರಿದ್ದ ಸಂದರ್ಭವೇ ಈ ಲೇಖನ ಪ್ರಕಟವಾಗಿತ್ತು. ಪತ್ರಿಕಾ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಕರುಣಾನಿಧಿ ಹಾಗೂ ಮಾರನ್ ಕುಟುಂಬದವರ ನಡುವಿನ ಬಾಂಧವ್ಯದಲ್ಲಿ ಬಿರುಕು ಉಂಟಾಗಿತ್ತು ಮತ್ತು ಡಿಎಂಕೆಯ ಸಂಸದರಾಗಿ ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ದಯಾನಿಧಿ ಮಾರನ್ ರಾಜೀನಾಮೆ ನೀಡಬೇಕಾಯಿತು. ಆದರೆ ಮುಂದಿನ ಚುನಾವಣೆಯ ಸಂದರ್ಭ ಎರಡೂ ಕುಟುಂಬದವರು ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾಗಿದ್ದರು. ಮುಂದಿನ ದಿನದಲ್ಲಿ ಕರುಣಾನಿಧಿ ಹಿರಿಯ ಪುತ್ರ ಅಳಗಿರಿಯನ್ನು ಪಕ್ಷದಿಂದ ಉಚ್ಛಾಟಿಸಿದ್ದರಲ್ಲದೆ ಕಿರಿಯ ಪುತ್ರ ಸ್ಟಾಲಿನ್ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News