ಗಲಭೆ ನಡೆದಿಲ್ಲ ಎಂಬ ಆದಿತ್ಯನಾಥ್ ಪ್ರತಿಪಾದನೆ ಪ್ರಹಸನ: ಮಾಯಾವತಿ

Update: 2019-03-21 18:02 GMT

ಹೊಸದಿಲ್ಲಿ, ಮಾ. 21: ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಗಲಭೆ ಸಂಭವಿಸಿಲ್ಲ ಎಂಬ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರತಿಪಾದನೆ ಒಂದು ರೀತಿಯ ಪ್ರಹಸನ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ಟ್ವಿಟ್ಟರ್‌ನ ಮೈಕ್ರೊ ಬ್ಲಾಗಿಂಗ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮಾಯಾವತಿ, ಉತ್ತರಪ್ರದೇಶದಲ್ಲಿ ನಡೆದ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳು ದೇಶಕ್ಕೆ ಕೆಟ್ಟ ಹೆಸರು ತಂದಿದೆ ಎಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಯಾವುದೇ ಗಲಭೆ ಸಂಭವಿಸಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿದೆ. ಈ ಅವಧಿಯಲ್ಲಿ ಬಿಜೆಪಿಯ ನಾಯಕರು ಹಾಗೂ ಸಚಿವರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂದೆ ತೆಗೆಯುವ ಪ್ರಯತ್ನದಲ್ಲಿ ಇದ್ದರು. ಅವರಿಗೆ ಗುಂಪಿನಿಂದ ಥಳಿಸಿ ಹತ್ಯೆ ನಡೆಸಿರುವ ಬಗ್ಗೆ ಎಲ್ಲಿ ತಿಳಿಯಬೇಕು. ಕೊನೆಯದಾಗಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕಾಯಿತು ಎಂದು ಮಾಯಾವತಿ ಹೇಳಿದ್ದಾರೆ.

 ಉತ್ತರಪ್ರದೇಶದ ಬಿಜೆಪಿ ಆಡಳಿತದ ಕಾನೂನು ಹಾಗೂ ಸುವ್ಯವಸ್ಥೆ ದೇಶಕ್ಕೆ ಮಾದರಿ. ಈ ಸಂದರ್ಭ ರಾಜ್ಯದಲ್ಲಿ ಯಾವುದೇ ಗಲಭೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ ಎರಡು ದಿನಗಳ ಬಳಿಕ ಮಾಯಾವತಿ ಈ ಟೀಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News