ಲೋಕಸಭಾ ಚುನಾವಣೆ: ಕೇರಳದಲ್ಲಿ ಸ್ಥಾನ ಹಂಚಿಕೆ ಒಪ್ಪಂದ ಅಂತಿಮಗೊಳಿಸಿದ ಬಿಜೆಪಿ

Update: 2019-03-21 18:07 GMT

ಹೊಸದಿಲ್ಲಿ, ಮಾ. 20: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತ್ ಧರ್ಮ ಜನ ಸೇನಾ ಹಾಗೂ ಕೇರಳ ಕಾಂಗ್ರೆಸ್‌ನೊಂದಿಗೆ ಸ್ಥಾನ ಹಂಚಿಕೆ ಒಪ್ಪಂದವನ್ನು ಬಿಜೆಪಿ ಬುಧವಾರ ಅಂತಿಮಗೊಳಿಸಿದೆ.

 ಕೇರಳದಲ್ಲಿ ಒಟ್ಟು 20 ಲೋಕಸಭಾ ಸ್ಥಾನಗಳಿದ್ದು, ಎಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಪಕ್ಷ ಕೇರಳದ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ. ಮಿತ್ರ ಪಕ್ಷವಾದ ಭಾರತ್ ಧರ್ಮ ಜನ ಸೇನಾ 5 ಕ್ಷೇತ್ರಗಳಲ್ಲಿ ಹಾಗೂ ಪಿ.ಸಿ. ಥಾಮಸ್ ನೇತೃತ್ವದ ಕೇರಳ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಹೇಳಿದ್ದಾರೆ.

 ಭಾರತ್ ಧರ್ಮ ಜನ ಸೇನಾಕ್ಕೆ ತ್ರಿಶೂರು, ಮಾವೆಲಿಕ್ಕರಾ, ಇಡುಕ್ಕಿ, ಅಲತ್ತೂರು ಹಾಗೂ ವಯನಾಡು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಕುಮ್ಮನಮ್ ರಾಜಶೇಖರನ್ ಸ್ಪರ್ಧಿಸುವ ಕ್ಷೇತ್ರವನ್ನು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ನಿರ್ಧರಿಸಲಿದೆ. ಈ ತಿಂಗಳ ಆರಂಭದಲ್ಲಿ ಮಿರೆರಾಮ್ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ರಾಜಶೇಖರನ್ ಬಿಜೆಪಿಯ ಕೇರಳ ಘಟಕದ ಅಧ್ಯಕ್ಷರಾಗಿದ್ದರು ಎಂದು ರಾವ್ ತಿಳಿಸಿದ್ದಾರೆ. ರಾಜ್ಯದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಗುರುವಾರ ಪ್ರಕಟಿಸುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News