ಉಗ್ರರ ಒತ್ತೆ ಸೆರೆಯಲ್ಲಿದ್ದ ಇಬ್ಬರು ನಾಗರಿಕರಲ್ಲಿ ಓರ್ವನನ್ನು ಬಿಡುಗಡೆಗೊಳಿಸಿದ ಭದ್ರತಾ ಪಡೆ

Update: 2019-03-21 18:10 GMT

ಶ್ರೀನಗರ, ಮಾ. 21: ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಬಲೆಗೆ ಬಿದ್ದ ಬಳಿಕ ಉಗ್ರರು ಇಬ್ಬರು ನಾಗರಿಕರನ್ನು ಒತ್ತೆ ಸೆರೆ ಇರಿಸಿಕೊಂಡಿದ್ದು, ಓರ್ವ ನಾಗರಿಕನನ್ನು ಭದ್ರತಾ ಪಡೆ ಬಿಡುಗಡೆಗೊಳಿಸಿದೆ.

 ಇಬ್ಬರು ನಾಗರಿಕರಲ್ಲಿ ಒಬ್ಬರನ್ನು ಉಗ್ರರಿಂದ ಬಿಡುಗಡೆಗೊಳಿಸಲು ಭದ್ರತಾ ಪಡೆ ಯಶಸ್ವಿಯಾಗಿದೆ. ''ಇಬ್ಬರು ನಾಗರಿಕರನ್ನು ಉಗ್ರರು ಒತ್ತೆ ಸೆರೆ ಇರಿಸಿಕೊಂಡಿದ್ದರು. ಭದ್ರತಾ ಪಡೆ, ಪೊಲೀಸರು ಹಾಗೂ ಸಮುದಾಯದ ಸದಸ್ಯರ ನೆರವಿನಿಂದ ಓರ್ವ ನಾಗರಿಕನನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲಾಗಿದೆ. ಇನ್ನೋರ್ವ ನಾಗರಿಕನನ್ನು ರಕ್ಷಿಸಲು ಪ್ರಯತ್ನ ನಡೆಯುತ್ತಿದೆ'' ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಬೇಹುಗಾರಿಕೆ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆ ಹಾಜಿನ್‌ನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು. ಆ ಪ್ರದೇಶದಲ್ಲಿದ್ದ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಉಗ್ರರು ಇಬ್ಬರು ನಾಗರಿಕರನ್ನು ಒತ್ತೆ ಸೆರೆ ಇರಿಸಿಕೊಂಡಿದ್ದುದರಿಂದ ಭದ್ರತಾ ಪಡೆ ಎಚ್ಚರಿಕೆಯಿಂದ ಪ್ರತಿದಾಳಿ ನಡೆಸಿ ಓರ್ವ ನಾಗರಿಕನನ್ನು ಬಿಡುಗಡೆಗೊಳಿಸುವಲ್ಲಿ ಸಫಲವಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News