ಶಿರ್ತಾಡಿಯಲ್ಲಿ ಮರಕ್ಕೆ ಕಾರು ಢಿಕ್ಕಿ: ತುಳು ಚಲನಚಿತ್ರ ನಿರ್ದೇಶಕ ಮೃತ್ಯು

Update: 2019-03-22 13:50 GMT

ಮೂಡುಬಿದಿರೆ: ಮೂಡುಕೊಣಾಜೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ತುಳು ಚಿತ್ರರಂಗದ ಯುವ ನಿರ್ದೇಶಕ ಮುಹಮ್ಮದ್ ಹಾರಿಸ್(27)ಮೃತಪಟ್ಟಿದ್ದಾರೆ.

ಹಾರಿಸ್ ಅವರು ಹೌದಾಲು ನಿವಾಸಿ ಆದಂ ಬ್ಯಾರಿ ಅವರ ಪುತ್ರ. ಅವರ ನಿರ್ದೇಶನದ 'ಆಟಿಡೊಂಜಿ ದಿನ' ಚಿತ್ರದ ಚಿತ್ರೀಕರಣ ಮೂಡುಬಿದಿರೆ ಪರಿಸರದಲ್ಲಿ ನಡೆಯುತ್ತಿತ್ತು. ಕೆಲವು ದಿನಗಳಿಂದ ಹಗಲು ರಾತ್ರಿ ಎಂಬಂತೆ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದವರು ಗುರುವಾರ ರಾತ್ರಿ ಮನೆಗೆ ಬಂದಿದ್ದರು. ಸ್ವಲ್ಪ ಹೊತ್ತಿನಲ್ಲಿ  ನಿರ್ಮಾಪಕರನ್ನು ಭೇಟಿಯಾಗಲು ಓಮ್ನಿ ಕಾರಿನಲ್ಲಿ ಶಿರ್ತಾಡಿಗೆ ಹೊರಟಿದ್ದರು. ಮೂಡುಕೊಣಾಜೆ ಎಂಬಲ್ಲಿ ರಸ್ತೆ ಬದಿಯ ಮರಕ್ಕೆ ಇವರ ವಾಹನ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅದೇ ದಾರಿಯಲ್ಲಿ ಬೈಕ್‍ನಲ್ಲಿ ಬಂದ ಇವರ ಸ್ನೇಹಿತರೊಬ್ಬರು ಹ್ಯಾರಿಸ್‍ನನ್ನು ವಾಹನದಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಆದಮ್ ಅವರ ಐವರು ಮಕ್ಕಳ ಪೈಕಿ ಹಾರಿಸ್ ಹಿರಿಯವರಾಗಿದ್ದು ಉಳಿದ ನಾಲ್ವರು ಹೆಣ್ಣುಮಕ್ಕಳು. 

ಚಿಕ್ಕಂದಿನಿಂದಲೆ ಚಿತ್ರರಂಗದ ಆಸಕ್ತಿ: ಹಾರಿಸ್ ಅವರಿಗೆ ಚಿಕ್ಕಂದಿನಿಂದಲೆ, ಚಿತ್ರರಂಗದ ಬಗ್ಗೆ ಆಸಕ್ತಿ. ಶಂಕರ್ ನಾಗ್ ಅಭಿಮಾನಿಯಾಗಿದ್ದು ಅವರ ಹೆಸರಿನಲ್ಲಿ ಊರಲ್ಲಿ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದ್ದರು. ಕಾಶಿನಾಥ್ ಜತೆ ಹಲವು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಲಕ್ಷ್ಮಿ, ಬ್ರೇಕಿಂಗ್ ನ್ಯೂಸ್, ಮುತ್ತು ಮಾವುತ, ಚೆಲ್ಲಾಪಿಲ್ಲಿ, ಮಾರ ಎಲ್‍ಎಲ್‍ಬಿ ಹೀಗೆ ಹಲವು ಕನ್ನಡ ಚಿತ್ರಗಳಿಗೆ ಮತ್ತು ಪಂಜರದ ಗಿಳಿ, ಮನೆಯೊಂದು ಮೂರುಬಾಗಿಲು, ಚಕ್ರವಾಹನ ದಾರವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 

'ಬೈಲ ಕುರಲ್' ತುಳು ಚಿತ್ರಕ್ಕೆ ನಿರ್ದೇಶಕರಾಗಿದ್ದರು. ಅವರು ನಿರ್ದೇಶಿಸಿದ 'ಆಟಿಡೊಂಜಿ ದಿನ' ಎರಡನೇ ತುಳುಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಟೆಲಿಫಿಲ್ಮ್ ನಿರ್ದೇಶಿಸಿ ಸ್ಥಳೀಯರಿಗೆ ಅವಕಾಶ ನೀಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News