ವಿಶ್ವ ವಿಶೇಷ ಒಲಿಂಪಿಕ್ಸ್: ಮಾ. 25ರಂದು ಪದಕ ವಿಜೇತರಿಗೆ ಸನ್ಮಾನ

Update: 2019-03-22 09:02 GMT

ಮಂಗಳೂರು, ಮಾ.22: ಅಬುಧಾಬಿಯಲ್ಲಿ ಮಾ. 14ರಿಂದ 22ರವರೆಗೆ ನಡೆದ ವಿಶ್ವ ವಿಶೇಷ ಒಲಿಂಪಿಕ್ಸ್ ಜಾಗತಿಕ ಬೇಸಿಗೆ ಕ್ರೀಡಾಕೂಟ-2019ರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿ ಶಾಲೆ ವೃತ್ತಿ ತರಬೇತಿ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ಅಭಿಲಾಷ್ ಬಿ. ಮೂರು ಚಿನ್ನ (ಸ್ಕಾಟ್, ಡೆಡ್‌ಲ್‌ಟಿ, ಓವರ್‌ಆಲ್), ಒಂದು ಕಂಚಿನ ಪದಕ (ಬೆಂಚ್‌ಪ್ರೆಸ್) ಪಡೆದಿದ್ದಾರೆ.

ವೃತ್ತಿ ತರಬೇತಿ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ಪ್ರಜ್ವಲ್ ಲೋಬೊ 3 ಚಿನ್ನ (ಬೆಂಚ್‌ಪ್ರೆಸ್, ಡೆಡ್‌ಲ್‌ಟಿ, ಓವರ್ ಆಲ್) ಮತ್ತು ಸ್ಕ್ವಾಟ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.

ಮಂಗಳೂರಿನ ಬೆಂದೂರ್‌ನ ಸಂತ ಆಗ್ನೆಸ್ ವಿಶೇಷ ಶಾಲೆಯ ಆ್ಯಸ್ಲಿ ಡಿಸೊಜ ಒಟ್ಟು ನಾಲ್ಕು ಕಂಚಿನ ಪದಕ (ಸ್ಕಾಟ್,ಬೆಂಚ್‌ಪ್ರೆಸ್, ಡೆಡ್‌ಲ್‌ಟಿಘಿ, ಓವರ್ ಆಲ್) ಪಡೆದಿದ್ದಾರೆ. ಆಗ್ನೆಸ್‌ನ ವೃತ್ತಿಪರ ತರಬೇತಿ ಕೇಂದ್ರದ ನಿಝಾಮುದ್ದೀನ್ ಯುನೈಟೆಡ್ ಫುಟ್‌ಬಾಲ್‌ನಲ್ಲಿ ಭಾಗವಹಿಸಿದ್ದು, ತಂಡಕ್ಕೆ ನಾಲ್ಕನೇ ಸ್ಥಾನ ದೊರೆತಿದೆ. ಈ ಎಲ್ಲಾ ಪ್ರಶಸ್ತಿ ವಿಜೇತರನ್ನು ಮಾ. 25ರಂದು ಅಭಿನಂದಿಸಲಾಗುವುದು ಎಂದು ಸಾನಿಧ್ಯ ವಸತಿ ಶಾಲೆ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವ ವಿಶೇಷ ಒಲಿಂಪಿಕ್ಸ್‌ನಲ್ಲಿ ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸಾನಿಧ್ಯ ಮತ್ತು ಸಂತ ಆಗ್ನೆಸ್ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸ್ವಾಗತಿಸಲಾಗುವುದು.ಬಳಿಕ ಮೆರವಣಿಗೆ ಮೂಲಕ ಮಂಗಳಾ ಕ್ರೀಡಾಂಗಣಕ್ಕೆ ತೆರಳಿ ಸನ್ಮಾನಿಸಲಾಗುವುದು.

ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಕ್ರೀಡಾಪಟುಗಳು ಪದಕ ವಿಜೇತರನ್ನು ಅಭಿನಂದಿಸಲಿ ದ್ದಾರೆ ಎಂದು ವಿವರಿಸಿದರು.

ಪವರ್‌ಲಿಫ್ಟಿಂಗ್ ಕ್ರೀಡಾಪಟುಗಳಿಗೆ ಯಾವುದೇ ಲಾಪೇಕ್ಷೆ ಇಲ್ಲದೆ ಅಂತಾರಾಷ್ಟ್ರೀಯ ತೀರ್ಪುಗಾರರಾದ ಪ್ರೇಮನಾಥ ಉಳ್ಳಾಲ್, ಸರಸ್ವತಿ ಪುತ್ರನ್, ವಿಶಾಲ್ ಅವರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ತರಬೇತಿ ನೀಡಿದ್ದರು. ನಿಜಾಮುದ್ದೀನ್ ಅವರಿಗೆ ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ತರಬೇತುದಾರ ನಾರಾಯಣ ಶೇರಿಗಾರ್ ತರಬೇತಿ ನೀಡಿದ್ದರು ಎಂದರು.

ಸಂತ ಆಗ್ನೆಸ್ ವಿಶೇಷ ಶಾಲೆ ಪ್ರಾಂಶುಪಾಲರಾದ ಭಗಿನಿ ಮರಿಯಾ ಶೃತಿ, ಪ್ರೇಮನಾಥ ಉಳ್ಳಾಲ್, ನಾರಾಯಣ ಶೇರಿಗಾರ್ ಉಪಸ್ಥಿತರಿದ್ದರು.

ವಿಶೇಷ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ

ವಿಶೇಷ ಶಾಲೆಗಳ ವಿಶೇಷ ವಿದ್ಯಾರ್ಥಿಗಳು ವಿಶ್ವ ವಿಶೇಷ ಒಲಿಂಪಿಕ್ಸ್‌ನಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಆದರೆ, ಈ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳುವ ವೆಚ್ಚವನ್ನು ಮಕ್ಕಳ ಪೋಷಕರು ಮತ್ತು ಆಯಾ ಶಾಲೆಗಳು ಭರಿಸಿವೆ. ವಿದ್ಯಾರ್ಥಿಗಳ ಸಾಧನೆಗೆ ಸಮಾಜ ನೆರವಾಗಬೇಕಿದೆ. ವಿವಿಧ ಸಂಘ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಕಂಪೆನಿಗಳು ಈ ವಿದ್ಯಾರ್ಥಿಗಳಿಗೆ ನೆರವು ನೀಡಬೇಕು ಎಂದು ತರಬೇತುದಾರರಾದ ನಾರಾಯಣ ಶೇರಿಗಾರ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News