‘ಪಿಎಂ ನರೇಂದ್ರ ಮೋದಿ’ ಚಿತ್ರ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ಆಗ್ರಹ

Update: 2019-03-22 15:11 GMT

ಹೊಸದಿಲ್ಲಿ, ಮಾ.22: ಏಳು ಹಂತಗಳ ಲೋಕಸಭಾ ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ‘ಪಿಎಂ ನರೇಂದ್ರ ಮೋದಿ’ ಚಿತ್ರವನ್ನು ನಿಷೇಧಿಸುವಂತೆ ಕೋರಿ ಡಿಎಂಕೆ ಮತ್ತು ಎನ್‌ಸಿಪಿ ಚುನಾವಣಾ ಆಯೋಗದ ಮೆಟ್ಟಿಲನ್ನೇರಿವೆ.

ಎ.11ರಂದು ಚುನಾವಣೆಗಳು ಆರಂಭಗೊಳ್ಳುವ ಒಂದು ವಾರ ಮೊದಲು, ಎ.5ಕ್ಕೆ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಯಾಗಲಿದೆ. ಅಂತಿಮ ಹಂತದ ಮತದಾನ ಮೇ 19ರಂದು ನಡೆಯಲಿದ್ದು,ಮೇ 23ರಂದು ಫಲಿತಾಂಶಗಳು ಪ್ರಕಟವಾಗಲಿವೆ.

 ‘ಪಿಎಂ ನರೇಂದ್ರ ಮೋದಿ’ ಪಕ್ಷ ಆಧಾರಿತ ಚಿತ್ರವಾಗಿದೆ ಮತ್ತು ಅದು ಮೋದಿಯವರ ರಾಜಕೀಯ ಜೀವನ ಶೈಲಿಯನ್ನು ತೋರಿಸುವುದರಿಂದ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಡಿಎಂಕೆ ನಾಯಕ ಪಿ.ಎಸ್.ಅರಸು ಭೂಪತಿ ಅವರು ಮುಖ್ಯ ಚುನಾವಣಾ ಆಯುಕ್ತ,ಮುಖ್ಯ ಚುನಾವಣಾಧಿಕಾರಿ ಮತ್ತು ತಮಿಳುನಾಡು ಚುನಾವಣಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಎನ್‌ಸಿಪಿಯೂ ಚಿತ್ರದ ಬಗ್ಗೆ ತನ್ನ ಆಕ್ಷೇಪಗಳನ್ನು ಮಹಾರಾಷ್ಟ್ರದ ಚುನಾವಣಾಧಿಕಾರಿಗಳಿಗೆ ತಿಳಿಸಿದೆ. ಸಾಮಾಜಿಕ ಜಾಲತಾಣಗಳು ಮತ್ತು ಟಿವಿ ವಾಹಿನಿಗಳಲ್ಲಿ ಚಿತ್ರದ ಟ್ರೇಲರ್‌ಗಳ ಪ್ರಸಾರವನ್ನು ನಿಷೇಧಿಸುವಂತೆ ಅದು ಕೋರಿದೆ ಎಂದು ಪಕ್ಷದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಬಾಬಾಸಾಹೇಬ್ ಪಾಟೀಲ ತಿಳಿಸಿದರು.

ಮೋದಿಯವರ ಆರೆಸ್ಸೆಸ್ ದಿನಗಳಿಂದ ಹಿಡಿದು 2014ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ವಿಜಯದ ನೇತೃತ್ವದವರೆಗೆ ಅವರ ಜೀವನದ ವಿವಿಧ ಹಂತಗಳನ್ನು ತೋರಿಸಿರುವ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಮೋದಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಮತದಾನಕ್ಕೆ ಮುನ್ನ 48 ಗಂಟೆಗಳ ಅವಧಿಗೆ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಎನ್‌ಎಸ್‌ಯುಐ ಗೋವಾ ಘಟಕವೂ ಮಾ.15ರಂದು ಚುನಾವಣಾ ಆಯೋಗವನ್ನು ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News