ಹೃದ್ರೋಗದಿಂದ ಬಳಲುತ್ತಿರುವ ಮೆಹುಲ್ ಚೋಕ್ಸಿ: ಭಾರತಕ್ಕೆ ಗಡಿಪಾರು ಸಂಶಯ

Update: 2019-03-22 17:42 GMT

ಮುಂಬೈ, ಮಾ.22: ಬ್ಯಾಂಕ್‌ಗಳಿಗೆ ಬಹುಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಆರೋಪಿ ಮೆಹುಲ್ ಚೋಕ್ಸಿ, ತಾನು ವಿವಿಧ ಹೃದಯ ಸಂಬಂಧಿ ಕಾಯಿಲೆ ಮತ್ತು ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬಳಲುತ್ತಿರುವುದಾಗಿ ಶುಕ್ರವಾರ ಹಣ ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಸದ್ಯ ಆ್ಯಂಟಿಗುವದಲ್ಲಿ ತಲೆಮರೆಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿಯ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ ಎಂದು ಬುಧವಾರ ವರದಿಯಾದ ಹಿನ್ನೆಲೆಯಲ್ಲಿ ಚೋಕ್ಸಿ ಈ ಮನವಿಯನ್ನು ಸಲ್ಲಿಸಿದ್ದಾರೆ. ಈ ಮನವಿಯ ವಿಚಾರಣೆಯನ್ನು ನ್ಯಾಯಾಲಯ ಎಪ್ರಿಲ್ 9ಕ್ಕೆ ಮುಂದೂಡಿದೆ. ಚೋಕ್ಸಿಯ ಅನಾರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ವಕೀಲರಾದ ವಿಜಯ್ ಮತ್ತು ಅಶುಲ್ ಅಗರ್ವಾಲ್, ಅನಾರೋಗ್ಯದ ಕಾರಣದಿಂದ ಚೋಕ್ಸಿ ಪ್ರಯಾಣಿಸಲು ಸಾಧ್ಯವಿಲ್ಲ. ಹಾಗಾಗಿ ಅವರನ್ನು ಭಾರತಕ್ಕೆ ಕಳುಹಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ. ಚೋಕ್ಸಿ ಆರೋಗ್ಯದ ಬಗ್ಗೆ ವಕೀಲರು 38 ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದು ಈ ಪೈಕಿ, ಚೋಕ್ಸಿ ಆ್ಯಂಟಿಗುವಾದಲ್ಲಿ ನಿರಂತರ ವೈದ್ಯಕೀಯ ನಿಗಾವಣೆಯಲ್ಲಿರಬೇಕು ಮತ್ತು ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಬಹುದಾದ ಕಾರಣ ಆದಷ್ಟು ಪ್ರಯಾಣಿಸುವುದನ್ನು ಕಡಿಮೆ ಮಾಡಬೇಕು ಎಂಬ ವೈದ್ಯರ ಇತ್ತೀಚಿನ ಸಲಹೆಯ ದಾಖಲೆಯನ್ನೂ ನೀಡಿದ್ದಾರೆ.

ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಜೊತೆಯಾಗಿ ಪಂಜಾಬ್ ಆ್ಯಂಡ್ ನ್ಯಾಶನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ವರ್ಷದ ಹಿಂದೆ ಇವರಿಬ್ಬರೂ ದೇಶ ತೊರೆದಿದ್ದಾರೆ. ಚೋಕ್ಸಿ 2018ರ ಜನವರಿ 15ರಂದು ಆ್ಯಂಟಿಗುವಾ ಮತ್ತು ಬರ್ಬುಡದ ಪೌರತ್ವವನ್ನು ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News