ಬಿ.ಕೆ.ಹರಿಪ್ರಸಾದ್ ಅಥವಾ ಮಿಥುನ್ ರೈಗೆ ದ.ಕ ಕಾಂಗ್ರೆಸ್ ಟಿಕೆಟ್

Update: 2019-03-22 19:00 GMT

ಮಂಗಳೂರು, ಮಾ.23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಅಂತಿಮ ಹಂತಕ್ಕೆ ತಲುಪಿದ್ದು, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಥವಾ ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಅಧ್ಯಕ್ಷ ಮಿಥುನ್ ರೈ ಇವರಲ್ಲಿ ಒಬ್ಬರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ದ.ಕ. ಲೋಕಸಭಾ ಕ್ಷೇತ್ರದಿಂದ ಬಹಳಷ್ಟು ಪ್ರಭಾವಿ ಆಕಾಂಕ್ಷಿಗಳಿದ್ದ ಕಾರಣ ಗುರುವಾರ ಮತ್ತು ಶುಕ್ರವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ರಾಜ್ಯ ಮತ್ತು ದ.ಕ. ಜಿಲ್ಲಾ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೊಸ ಮುಖಕ್ಕೆ ಆದ್ಯತೆ ನೀಡಲು ರಾಜ್ಯ ನಾಯಕರು ಆಸಕ್ತಿ ತೋರಿದ್ದರಿಂದ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಅಂತಿಮವಾಗಿ ಮಿಥುನ್ ರೈ ಹೆಸರು ಬಹುತೇಕ ಖಚಿತ ಎಂಬಂತಾಗಿತ್ತು. ಆದರೆ ಶುಕ್ರವಾರ ತಡರಾತ್ರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮೂಲಕ ಮತ್ತೆ ಬಿ.ಕೆ. ಹರಿಪ್ರಸಾದ್ ಅವರ ಹೆಸರೇ ಮುಂಚೂಣಿಗೆ ಬಂದಿದೆ ಎಂದು ಎಐಸಿಸಿ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ ಹೈಕಮಾಂಡ್ ಮೇಲೆ ಬಿ.ಕೆ.ಹರಿಪ್ರಸಾದ್ ಪ್ರಭಾವ ಬೀರುವಲ್ಲಿ ಸಂಪೂರ್ಣ ಯಶಸ್ವಿಯಾದರೆ ಟಿಕೆಟ್ ರೇಸ್‌ನಲ್ಲಿ ಅವರ ಕೈ ಮೇಲಾಗುವ ಸಾಧ್ಯತೆ ಇದೆ.

ಶುಕ್ರವಾರ ತಡರಾತ್ರಿ ದ.ಕ. ಸಹಿತ 144 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದ್ದು, ಶನಿವಾರ ಮಧ್ಯಾಹ್ನದೊಳಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಇದರೊಂದಿಗೆ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುತೂಹಲಕ್ಕೆ ತೆರೆ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News