1 ಕೋಟಿ ರೂ.ಗಳ ದಾಖಲೆ ನೀಡಿ 193 ಕೋಟಿ ರೂ. ವಂಚಿಸಿದ ಪ್ರಮೋದ್ ವಿರುದ್ಧ ಅಭಿಯಾನ: ಆರ್ ಟಿಐ ಕಾರ್ಯಕರ್ತ ಅಬ್ರಹಾಂ

Update: 2019-03-23 11:54 GMT

#"ಪ್ರಮೋದ್ ರಂತವರು ದೇಶವನ್ನೇ ನುಂಗಿ ಹಾಕುತ್ತಾರೆ"

ಉಡುಪಿ, ಮಾ.23: ಬ್ಯಾಂಕಿಗೆ 1.10 ಕೋಟಿ ರೂ. ಮೊತ್ತದ ಭೂಮಿಯ ದಾಖಲೆಯನ್ನು ನೀಡಿ 193 ಕೋಟಿ ರೂ. ಸಾಲ ಪಡೆಯುವ ಮೂಲಕ ವಂಚನೆ ಎಸಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಈ ಚುನಾವಣೆಯಲ್ಲಿ ಅಭಿಯಾನ ನಡೆಸಲಾಗುವುದು ಎಂದು ಬೆಂಗಳೂರಿನ ಆರ್‌ ಟಿಐ ಕಾರ್ಯಕರ್ತ ಅಬ್ರಹಾಂ ಟಿ.ಜೆ. ತಿಳಿಸಿದ್ದಾರೆ.

ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ 193 ಕೋಟಿ ರೂ. ಸಾಲ ಪಡೆದಿರುವ ಬಗ್ಗೆ 2018ರ ಮಾ.13ರಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್ ಅಬ್ರಹಾಂ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಉಡುಪಿ ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಈ ಸಂಬಂಧ ಇಂದು ವಿಚಾರಣೆಗಾಗಿ ಉಡುಪಿ ನ್ಯಾಯಾಲಯಕ್ಕೆ ಹಾಜರಾದ ಅಬ್ರಾಹಂ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಚಾರವನ್ನು ನಾನು ಈ ಬಾರಿಯ ಚುನಾವಣೆಯಲ್ಲಿ ಬಹಿರಂಗವಾಗಿ ಎಲ್ಲ ಕಡೆ ಪ್ರಚಾರ ಮಾಡುತ್ತೇನೆ. ಯಾರಿಗೆ ಬೇಕಾದರೂ ಮತ ಹಾಕಿ ಪ್ರಮೋದ್ ಮಧ್ವರಾಜ್‌ಗೆ ಮತ ಹಾಕಬೇಡಿ ಎಂಬುದಾಗಿ ಮೂಲೆಮೂಲೆಗೆ ಹೋಗಿ ಹೇಳುತ್ತೇನೆ. ಇಡೀ ದೇಶವನ್ನೇ ನುಂಗಿ ಹಾಕುವ ಪ್ರಮೋದ್‌ ರಂತಹವರು ಸಂಸತ್‌ ಗೆ ಹೋಗಬಾರದು ಎಂದರು.

“ಈ ವಿಚಾರವನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ. ಪ್ರಮೋದ್ ಮಾಡಿರುವ ತಪ್ಪು ಎಲ್ಲರಿಗೂ ಗೊತ್ತು. ನನ್ನ ವಿರುದ್ಧ ಕೋರ್ಟನ್ನು ಬಳಸುವ ಪ್ರಮೋದ್ ವಿರುದ್ಧ ನಾನು ಯಾಕೆ ಚುನಾವಣೆಯನ್ನು ಬಳಸಬಾರದು. ಈ ಅವಕಾಶವನ್ನು ನಾನು ಸರಿಯಾಗಿ ಬಳಸಿಕೊಳ್ಳುತ್ತೇನೆ” ಎಂದು ಅವರು ತಿಳಿಸಿದರು.

“ನನಗೆ ಹಿಂಸೆ ಕೊಡುವ ಉದ್ದೇಶದಿಂದ ಪ್ರಮೋದ್ ಕ್ರಿಮಿನಲ್ ಕೇಸು ಹಾಕಿದ್ದಾರೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದೆ ನಾನು ಇವರಿಗೆ ಕಾನೂನು ಏನು ಎಂಬುದಾಗಿ ತೋರಿಸುತ್ತೇನೆ. ಇದೇ ಕೋರ್ಟ್‌ ನಲ್ಲಿ ಇವರ ವಂಚನೆ ಪ್ರಕರಣದ ತನಿಖೆ ನಡೆಸುವಂತೆ ನಾನು ಕೂಡ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ. ಅದಕ್ಕಾಗಿ ಬೇಕಾದ ಎಲ್ಲ ತಯಾರಿಯನ್ನು ಮಾಡಿದ್ದೇನೆ” ಎಂದು ಅವರು ಹೇಳಿದರು.

“ನನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ನಾನು 11 ಬಾರಿ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ. ಆದರೆ ದೂರು ನೀಡಿದ ಪ್ರಮೋದ್ ಈವರೆಗೆ ಹಾಜರಾಗಿಲ್ಲ. ಕಳೆದ ಬಾರಿ ನ್ಯಾಯಾಲಯವು ಕಡ್ಡಾಯ ಹಾಜರಾಗುವಂತೆ ಆದೇಶ ನೀಡಿದರೂ ಪ್ರಮೋದ್ ಇಂದು ಕೂಡ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯ ಸಂದರ್ಭ ಪ್ರಮೋದ್ ಮಧ್ವರಾಜ್ ಹಾಜರಾಗುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ” ಎಂದು ಅವರು ತಿಳಿಸಿದರು.

“ಹಣ ಕಳೆದುಕೊಳ್ಳುವ ಭೀತಿಯಲ್ಲಿ ಪ್ರಮೋದ್ ನನ್ನ ವಿರುದ್ಧ ಸಿವಿಲ್ ಬದಲು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅವರಲ್ಲಿ ಹಣ ಇಲ್ಲದಿದ್ದರೆ ಒಂದು ಎಕರೆ ಜಮೀನು ಪತ್ರ ಹಾಗೂ ನಾಲ್ಕು ಚೆಕ್ ನೀಡಿದರೆ ನಾನು ಕೋರ್ಟ್ ಶುಲ್ಕ ನೀಡುತ್ತೇನೆ. ಧೈರ್ಯ ಇದ್ದರೆ ನನ್ನ ವಿರುದ್ಧ ಸಿವಿಲ್ ಕೇಸು ದಾಖಲಿಸಿ. ಇಲ್ಲದಿದ್ದರೆ ಅವರು 193 ಕೋಟಿ ರೂ. ಹಗರಣ ಮಾಡಿರುವುದು ಒಪ್ಪಿಕೊಂಡಂತೆ” ಎಂದು ಅವರು ಹೇಳಿದರು.

ಮೇ 4ಕ್ಕೆ ವಿಚಾರಣೆ ಮುಂದೂಡಿಕೆ

ಉಡುಪಿ ಒಂದನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿ ಆದೇಶ ನೀಡಲಾಗಿದೆ.

ಆರ್‌ ಟಿಐ ಕಾರ್ಯಕರ್ತ ಅಬ್ರಹಾಂ ಟಿ.ಜೆ. ನ್ಯಾಯಾ ಲಯಕ್ಕೆ ಹಾಜರಾಗಿದ್ದು, ಈ ವೇಳೆ ದೂರುದಾರರಾದ ಪ್ರಮೋದ್ ಮಧ್ವರಾಜ್ ಗೈರುಹಾಜರಿ ಬಗ್ಗೆ ಅವರು ಪ್ರಶ್ನಿಸಿದರು. ಇದನ್ನು ಪ್ರಮೋದ್ ಪರ ವಕೀಲ ಶಾಂತಾರಾಮ್ ಶೆಟ್ಟಿ ಸಮರ್ಥನೆ ಮಾಡಿದರು.

ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ದೂರುದಾರರ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿ ಆದೇಶ ನೀಡಿದರು. ಮುಂದಿನ ವಿಚಾರಣೆಯ ಸಂದರ್ಭ ದೂರುದಾರರಾದ ಪ್ರಮೋದ್ ಮಧ್ವರಾಜ್ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News