ಜಾನಪದ ವಿದ್ವಾಂಸ ಡಾ. ಅಮೃತ್ ಸೋಮೇಶ್ವರರಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ

Update: 2019-03-23 11:47 GMT

ಉಳ್ಳಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ  ಈ ಸಾಲಿನ ಪ್ರಶಸ್ತಿಯನ್ನು ಜನಪದ ವಿದ್ವಾಂಸ, ಯಕ್ಷಗಾನ ಸಂಶೋಧಕ, ಸಾಹಿತಿ ಡಾ.ಅಮೃತ್ ಸೋಮೇಶ್ವರ ಅವರಿಗೆ ತಮ್ಮ ಸ್ವಗೃಹ ಸೋಮೇಶ್ವರದ 'ಒಲುಮೆ'ಯಲ್ಲಿ ಶನಿವಾರ ಪ್ರದಾನ ಮಾಡಲಾಯಿತು. 

ಪ್ರಶಸ್ತಿ ಪ್ರಧಾನ ಮಾಡಿದ ಮಾಹೆ ಸಹಕುಲಾಧಿಪತಿ ಡಾ.ಹೆಚ್,ಎಸ್ ಬಲ್ಲಾಳ್ ಮಾತನಾಡಿ , ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಡಾ. ಸೋಮೇಶ್ವರ  ಅವರ ಸಾಹಿತ್ಯ  ಸೇವೆಯನ್ನು ಗುರುತಿಸಿ ಬಹಳಷ್ಟು ಪ್ರಶಸ್ತಿ ಸಂದಿದ್ದರೂ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಉಲ್ಲೇಖನೀಯ. ಈ ಮೂಲಕ ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸಿದೆ. ಮಾಹೆ  ಕೇವಲ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಾತ್ರ ಗಮನಹರಿಸದೆ ಕಲೆ ಮತ್ತು ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದ ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಟಿ.ವಿ ಮೋಹನದಾಸ್ ಪೈ ಪ್ರಾಯೋಜಿತ ಶ್ರೀಮತಿ ಟಿ.ವಿಮಲಾ ವಿ. ಪೈ ಅವರ ಹೆಸರಿನಲ್ಲಿ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ಖ್ಯಾತ ಸಾಹಿತಿಗಳಾದ ಶ್ರೀನಿವಾಸ ಗಿತ್ತಿ, ನಿಸಾರ್ ಅಹ್ಮದ್, ಸುರೇಂದ್ರ ರಾವ್ ಹಾಗೂ ಕೆ.ವಿ ತಿರುಮಲೇಶ್ ಅವರಿಗೆ ಪ್ರದಾನ ಮಾಡಲಾಗಿದೆ. ಐದನೇ ಪ್ರಶಸ್ತಿಯನ್ನು  ಪ್ರೊ.ಅಮೃತ ಸೋಮೇಶ್ವರ ಅವರಿಗೆ ಸಂದಿದೆ ಎಂದರು.

ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಾಷ್ಟ್ರಕವಿ ಗೋವಿಂದ ಪೈಯವರ ಲೇಖನದ ಸಂಪುಟವೊಂದನ್ನು ಎಂಜಿಎಂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಇರಿಸಿ ತಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಳಿಸಲಾಗಿತ್ತು. ಅಂತಹ ಮಹಾನ್ ಸಾಹಿತಿಯ ಹೆಸರನ್ನು ಚಿರಸ್ಮರಣೀಯ ಮಾಡುವ ನಿಟ್ಟಿನಲ್ಲಿ ಮಾಹೆ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಅಮೃತ ಸೋಮೇಶ್ವರ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಅಪೇಕ್ಷಿಸಿಲ್ಲ. ಈ ಪ್ರಶಸ್ತಿ ಘನತೆ ಗಾಂಭೀರ್ಯ ಹೆಚ್ಚಿಸಿಲ್ಲ. ಹಿಂದಿನಂತೆಯೇ ವಿನಯಶೀಲನಾಗಿ ಎಲ್ಲರ ಜತೆಗೆ ಬೆರೆಯುತ್ತೇನೆ. ವರ್ಚಸ್ಸು ಮೀರಿ ಬದುಕುವ ಜಾಯಮಾನ ನನ್ನದಲ್ಲ. ಮೈಸೂರು ವಿಶ್ವವಿದ್ಯಾನಿಲಯ ಆ ಕಾಲದಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿರುವುದನ್ನು ನಯವಾಗಿ ತಿರಸ್ಕರಿಸಿದ ಶ್ರೇಷ್ಟ ಸಾಹಿತಿ ಗೋವಿಂದ ಪೈ ಅವರ ಹೆಸರಿನಲ್ಲಿ ಸ್ವೀಕರಿಸಿದ ಪ್ರಶಸ್ತಿ ಅಭಿಮಾನ ಹೆಚ್ಚಿಸಿದೆ, ಹೆಮ್ಮೆಯ ಸಂಗತಿ ಎಂದರು. 

ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ವಿಧ್ವಾಂಸ ಡಾ. ಪ್ರಭಾಕರ ಜೋಷಿ ಮಾತನಾಡಿ,  ಕಾರಂತ, ಮಾಸ್ತಿ, ಕುವೆಂಪುರವರ ನಂತರದ ತಲೆಮಾರಿನಲ್ಲಿ ಶ್ರೇಷ್ಟ ಐದು ಸಾಹಿತಿಗಳಲ್ಲಿ ಅಗ್ರಪಂತಿಯಲ್ಲಿರುವ ಅಮೃತ ಸೋಮೇಶ್ವರ, ಪ್ರಾದೇಶಿಕವಾಗಿ ಗುರುತಿಸಿಕೊಂಡಿರುವುದು ದುರಂತ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆಗೆ ರಾಷ್ಟ್ರಮನ್ನಣೆ ದೊರಕಬೇಕಿದ್ದರೂ ಅದರ ಹಿಂದೆ ಬೆನ್ನತ್ತಿ ಹೋದವರಲ್ಲ ಅಮೃತರು. ಕನ್ನಡದ ಸಾಹಿತ್ಯ ಕೃತಿಗಳಿಗಿಂತ ಕಡಿಮೆಯಿಲ್ಲದ ಸಾಹಿತ್ಯವನ್ನು ಕನ್ನಡ ಕ್ಷೇತ್ರಕ್ಕೆ ಒದಗಿಸಿಕೊಟ್ಟ ಮಹಾನ್ ಮೇಧಾವಿ. ಅನುವಾದ ಕೃತಿಗಳಲ್ಲಿ ಆಂಗ್ಲ ಸಾಹಿತ್ಯ ಲೋಕಕ್ಕಿಂತಲೂ ಮಿಗಿಲಾಗಿರುವುದನ್ನು ಕೊಟ್ಟಿರುವ ನೆಲೆಯಲ್ಲಿ ಗೋವಿಂದ ಪೈ ಅರ್ಹವಾಗಿ ಸಂದಿದೆ ಎಂದರು. 

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ್ ಹಿರೇಗಂಗ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಹೆ ಆಡಳಿತಾಧಿಕಾರಿ ಡಾ.ಹೆಚ್ ಶಾಂತಾರಾಮ್, ಕುಲಸಚಿವ ಡಾ. ನಾರಾಯಣ ಸಭಾಯಿತ್, ಮಂಗಳೂರು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಉಪಸ್ಥಿತರಿದ್ದರು. 

ಭ್ರಾಮರಿ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ.ಎ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News