ಮಂಚಿ: 40 ವರ್ಷದ ಬಳಿಕ ಒಂಟಿ ಮಹಿಳೆ ಮನೆಗೆ ವಿದ್ಯುತ್ ಸಂಪರ್ಕ

Update: 2019-03-23 13:56 GMT

ಬಂಟ್ವಾಳ, ಮಾ. 23: ಪ್ರತಿನಿತ್ಯ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಬದುಕನ್ನು ನಿಭಾಯಿಸುತ್ತಿದ್ದ ಒಂಟಿ ಮಹಿಳೆಯ ಮನೆಗೆ ಬರೋಬ್ಬರಿ 40 ವರ್ಷದ ಬಳಿಕ ವಿದ್ಯುತ್ ಬೆಳಕನ್ನು ಕಂಡಿದ್ದು, ಎಸ್ಡಿಪಿಐ ಮಂಚಿ ಸಮಿತಿಯ ಮಾನವೀಯ ಹೋರಾಟಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಮೆಸ್ಕಾಂ ಹಾಗೂ ಗ್ರಾಮ ಪಂಚಾಯತ್ ನಡುವೆ ಸಮನ್ವಯದ ಕೊರತೆಯಿಂದ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಿಕಟ್ಟೆಯ ಎಂಬಲ್ಲಿ ಜೀವನ ನಡೆಸುತ್ತಿರುವ ಅವಿವಾಹಿತೆ ಗಿರಿಜಾ ಅವರು, ಕಳೆದ 40 ವರ್ಷದಿಂದ ವಿದ್ಯುತ್ ಸಂಪರ್ಕವಿಲ್ಲದೆ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಜೀವನವನ್ನು ಕಳೆಯುವಂತಾಗಿತ್ತು.

ಗಿರಿಜಾ ಅವರಲ್ಲಿ ಆಧಾರ್ ಕಾರ್ಡ್, ಮತದಾನ ಚೀಟಿ, ಎಲ್ಲವೂ ಇದೆ. ಈಗಾಗಲೇ 94ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿದೆ. ಸ್ಥಳೀಯ ಗ್ರಾಪಂ ಮಾತ್ರ ಕ್ಷುಲ್ಲಕ ಕಾರಣಗಳನ್ನು ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಹಿಂದೇಟು ಹಾಕಿದೆ ಎಂದು ಎಸ್ಡಿಪಿಐ ಆರೋಪಿಸಿತ್ತು. ಅದಲ್ಲದೆ, ಮಹಿಳೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಂಚಿ ವಲಯ ಎಸ್ಡಿಪಿಐ ನಿಯೋಗದೊಂದಿಗೆ ಇತ್ತೀಚೆಗೆ ಗ್ರಾಮ ಪಂಚಾಯತ್‍ಗೆ, ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಬಂಟ್ವಾಳ, ಉಪ ವಿಭಾಗ ಅಧಿಕಾರಿ ವಿಟ್ಲ ಮನವಿ ಮೂಲಕ ಒತ್ತಾಯಿಸಿತ್ತು.

ಮಾನವೀಯತೆಯ ಹೋರಾಟ ನಡೆಸಿದ ಮಂಚಿಯ ಎಸ್ಡಿಪಿಐ ಕಾರ್ಯಕರ್ತರಿಗೆ ಗಿರಿಜಾ ಅವರು ಮನದಾಳದ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಫೈಝಲ್ ಮಂಚಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವಕ ಕುಕ್ಕಾಜೆ ಮೋನು, ಇರ್ಷಾದ್ ಕುಕ್ಕಾಜೆ, ಡಿ.ಎನ್. ಫಾರೂಕ್ ಮಂಚಿ ಹಾಜರಿದ್ದರು.

ವಿದ್ಯುತ್ ಸಂಪರ್ಕ ವಂಚಿತದ ಬಗ್ಗೆ ಮಾಹಿತಿ ಅರಿತ 'ವಾರ್ತಾಭಾರತಿ'ಯು "ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ದಿನದೂಡುತ್ತಿರುವ ಒಂಟಿ ಮಹಿಳೆ!" ಎಂಬ ಶೀರ್ಷಿಕೆಯಡಿ ಮಾ. 13ರಂದು ವಿಶೇಷ ವರದಿ ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News