ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ‘ಕುಟುಂಬ ಟ್ರಸ್ಟ್‌ಗಳ ಸಮ್ಮಿಲನ’ ಕಾರ್ಯಕ್ರಮ

Update: 2019-03-23 14:03 GMT

ಮಂಗಳೂರು, ಮಾ.23: ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ‘ಕುಟುಂಬ ಟ್ರಸ್ಟ್‌ಗಳ ಸಮ್ಮಿಲನ’ ಎಂಬ ವಿಶಿಷ್ಟ ಕಾರ್ಯಕ್ರಮವು ಶನಿವಾರ ಟಿಆರ್‌ಎಫ್ ಸಭಾಂಗಣದಲ್ಲಿ ಜರುಗಿತು. ದ.ಕ. ಜಿಲ್ಲೆಯ 14 ಕುಟುಂಬ ಟ್ರಸ್ಟ್‌ಗಳ ಬಹುತೇಕ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟ್ರಸ್ಟ್ ಸ್ಥಾಪನೆಯ ಉದ್ದೇಶ ಮತ್ತು ಭವಿಷ್ಯದ ಗುರಿಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜಿಲ್ಲೆಯ ಮುಸ್ಲಿಂ ಸಮುದಾಯದ ಪ್ರತಿಯೊಂದು ಕುಟುಂಬವೂ ಟ್ರಸ್ಟ್‌ಗಳನ್ನು ಸ್ಥಾಪಿಸಿ ಪ್ರತಿಯೊಬ್ಬ ಸದಸ್ಯರ ಆರ್ಥಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗೆ ಸ್ಪಂದಿಸುವ ಮೂಲಕ ಸಮುದಾಯ ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಉದ್ಘಾಟನೆ: ಕಾರ್ಯಕ್ರಮವನ್ನು ಉದ್ಘಾಟಿಸಿದ ಗೂಡಿನಬಳಿ ಮಸೀದಿಯ ಖತೀಬ್ ರಿಯಾಝ್ ರಹ್ಮಾನಿ ಪ್ರತಿಯೊಂದು ಕುಟುಂಬವು ಸಂಬಂಧವನ್ನು ವೃದ್ಧಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ಪ್ರೀತಿ, ಸ್ನೇಹ, ವಾತ್ಸಲ್ಯಕ್ಕೆ ಆದ್ಯತೆ ನೀಡಬೇಕು. ಕುಟುಂಬ ಟ್ರಸ್ಟ್‌ಗಳನ್ನು ಸ್ಥಾಪಿಸಿ ಸಮಸ್ಯೆಗಳ ಮೂಲ ಅರಿತುಕೊಂಡು ಅವುಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೆನೆಪೊಯ ವಿವಿಯ ಡಾ. ಇಬ್ರಾಹೀಂ ನಾಗನೂರ್, ಉದ್ಯಮಿಗಳಾದ ನೂರ್ ಮುಹಮ್ಮದ್, ಎಸ್.ಎಂ. ಮುಸ್ತಫಾ, ಫತೇಹ್ ಮುಹಮ್ಮದ್ ಪುತ್ತಿಗೆ, ಡಾ. ಶರ್ವಾಕ್ ರಮ್ಲಾನ್, ನೌಶಾದ್ ಹಾಜಿ ಸೂರಲ್ಪಾಡಿ ಭಾಗವಹಿಸಿದ್ದರು. ಟಿಆರ್‌ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಮೀದ್ ಕಣ್ಣೂರು ವಂದಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಆತೂರಿನ ಹಾಜಿ ಅಬೂಬಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್, ಕಂದಕ್‌ನ ಹಮೀದುಲ್ಲಾಹ್ ವೆಲ್ಫೇರ್ ಟ್ರಸ್ಟ್, ಸಜಿಪ ಅಬ್ದುಲ್ ಖಾದರ್ ಹಾಜಿ ಫ್ಯಾಮಿಲಿ ಅಸೋಸಿಯೇಶನ್, ಕುದ್ರೋಳಿ ಹಸನಬ್ಬ ಫ್ಯಾಮಿಲಿ ಟ್ರಸ್ಟ್, ಆತೂರಿನ ಬಿ.ಕೆ. ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್, ಬೆಲ್ಲಚಾರ್ ಅಬ್ದುಲ್ ರಹ್ಮಾನ್ ಮುಕ್ರಿ ಅಸೋಸಿಯೇಶನ್, ಅರಂತೋಡಿನ ಪಟೇಲ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ರಮ್ಲಾನ್ಸ್ ಚಾರಿಟೇಬಲ್ ಟ್ರಸ್ಟ್, ಮದಕ ಅಬ್ದುಲ್ಲಾ ಮುಕ್ರಿ ಚಾರಿಟೇಬಲ್ ಫೌಂಡೇಶನ್, ಪುತ್ತೂರಿನ ಲಜಿನಾತ್ ಮಹೂನತುಲ್ ಅಖಾರಿಬ, ಆತೂರಿನ ಡಾ.ಕೆ.ಎಂ. ಶಾಹ್ ಮುಸ್ಲಿಯಾರ್ ಫೌಂಡೇಶನ್, ವಿಟ್ಲ ಕಲ್ಲಂಗಳದ ವಿ.ಕೆ.ಇಬ್ರಾಹೀಂ ವೆಲ್ಫೇರ್ ಟ್ರಸ್ಟ್, ಮೂಡುಬಿದಿರೆ ಅಲಂಗಾರಿನ ಮೊಹಿದಿನ್ ವೆಲ್ಫೇರ್ ಟ್ರಸ್ಟ್, ಕುದ್ಕೋಳಿಯ ಹವ್ವಾ ಹಸನ್ ಫೌಂಡೇಶನ್ ಸಹಿತ 14 ಕುಟುಂಬ ಟ್ರಸ್ಟ್‌ಗಳನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News