ಕಡಲತೀರದಲ್ಲಿ 40 ಕಿ.ಮೀ. ಮಾನವ ಸರಪಳಿ: ಮತದಾನದ ಜಾಗೃತಿಗೆ ಜಿಲ್ಲಾ ಸ್ವೀಪ್ ಸಮಿತಿಯ ವಿನೂತನ ಪ್ರಯತ್ನ

Update: 2019-03-23 14:38 GMT

ಮಂಗಳೂರು, ಮಾ.23: ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನದ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯು ಕಡಲತೀರದಲ್ಲಿ 40 ಕಿ.ಮೀ. ಮಾನವ ಸರಪಳಿ ಆಯೋಜಿಸುವ ಮೂಲಕ ವಿನೂತನ ಪ್ರಯತ್ನ ನಡೆಸಿದೆ.
ದ.ಕ. ಲೋಕಸಭಾ ಕ್ಷೇತ್ರದ ತಲಪಾಡಿಯಿಂದ ಮೂಲ್ಕಿ ಹೆಜಮಾಡಿವರೆಗೆ ಏಪ್ರಿಲ್ 7ರಂದು ಸಂಜೆ 5 ಗಂಟೆಗೆ ಏಕಕಾಲದಲ್ಲಿ ಸಾವಿರಾರು ಮಂದಿ ಕೈ ಕೈ ಹಿಡಿದುಕೊಂಡು ಮತದಾನದ ಮಹತ್ವ ಸಾರಲಿದ್ದಾರೆ.

ನಗರದ ಜಿಪಂ ಸಭಾಂಗಣದಲ್ಲಿ ಈ ಕುರಿತು ಪೂರ್ವಭಾವಿ ಸಭೆ ಶನಿವಾರ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ‘ತಲಪಾಡಿಯಿಂದ ಹಳೆಯಂಗಡಿವರೆಗೆ ಕಡಲ ದಂಡೆಯುದ್ದಕ್ಕೂ ಈ ಮಾನವ ಸರಪಳಿ ನಡೆಯಲಿದೆ. ಈ ಕುರಿತು ಅನೇಕ ಸಂಸ್ಥೆಗಳನ್ನು ಸಂಪರ್ಕಿಸಲಾಗಿದ್ದು, ಅವರ ಸಹಕಾರ ಪಡೆಯಲಾಗುವುದು’ ಎಂದರು.

ಉಳ್ಳಾಲ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಮತ್ತು ಮೂಲ್ಕಿ ಪ್ರದೇಶ ಎಂಬುದಾಗಿ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಪ್ರತಿ ವಿಭಾಗದಲ್ಲೂ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುವಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.

‘ಕಡಲತೀರದ 40 ಕಿ.ಮೀ. ವ್ಯಾಪ್ತಿಯ ನಡುವೆ ಮಾನವ ಸರಪಳಿ ಮಾಡಲಾಗದ ನೀರಿರುವ ಸುಮಾರು ನಾಲ್ಕು ಪ್ರದೇಶಗಳನ್ನು ಗುರುತಿಸಲಾಗಿದೆ. ಈ ‘ಗ್ಯಾಪ್’ನಲ್ಲಿ ಹಗ್ಗ ಕಟ್ಟಿ ಬ್ಯಾನರ್‌ಗಳನ್ನು ಅಳವಡಿಸಲಾಗುವುದು. ಪ್ರತಿ ಕಿ.ಮೀ.ಗೆ 750ರಿಂದ 800 ಮಂದಿ ಜನರ ಸಹಕಾರ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ವ್ಯವಸ್ಥಿತ ರೂಪುರೇಷೆ ತಯಾರಿಸಲಾಗುವುದು’ ಎಂದರು.

ಇದಕ್ಕೂ ಮೊದಲು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಸಿಕಾಂತ್ ಸೆಂಥಿಲ್, ಮಾನವ ಸರಪಳಿ ಮೂಲಕ ಜನರನ್ನು ಭಾವನಾತ್ಮಕವಾಗಿ ಮತದಾನದೆಡೆಗೆ ಪ್ರೇರೇಪಿಸಲಾಗುವುದು. ಇದನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದು ತಂಡದಿಂದ ಇನ್ನೊಂದು ತಂಡದ ನಡುವೆ ಸಂವಹನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕಡಲತಡಿ ಆಗಿರುವುದರಿಂದ ಸೂಕ್ತ ಮುನ್ನೆಚ್ಚರಿಕೆಯನ್ನೂ ವಹಿಸುವಂತೆ ಸೂಚನೆ ನೀಡಿದರು.

ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಸೆಲ್ವಮಣಿ ಮಾತನಾಡಿ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರು ಮಾತ್ರವಲ್ಲದೆ ಸಾರ್ವಜನಿಕರೂ ಈ ಮಾನವ ಸರಪಳಿಯಲ್ಲಿ ಸ್ವಯಂಪ್ರೇರಣೆಯಿಂದ ಭಾಗವಹಿಸಬಹುದು ಎಂದು ಹೇಳಿದರು.
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News