ನೋಟಾ ಅಭಿಯಾನ ಕಾನೂನು ಬಾಹಿರ: ಉಡುಪಿ ಜಿಲ್ಲಾಧಿಕಾರಿ ಕೊರ್ಲಪಾಟಿ

Update: 2019-03-23 14:52 GMT

ಉಡುಪಿ, ಮಾ.23: ನೋಟಾ ಮತದ ಬಗ್ಗೆ ಜನರಿಗೆ ಮಾಹಿತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೋಟಾ ಮತ ಹಾಕುವಂತೆ ಅಭಿಯಾನ ನಡೆಸಿ ಪ್ರಚಾರ ಮಾಡುವುದು ಮತ್ತು ಪ್ರಚೋದನೆ ನೀಡುವುದು ಕಾನೂನು ಬಾಹಿರವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಮತದಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ವಿಕಲಚೇತನರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ವಾಹನಗಳ ವ್ಯವಸ್ಥೆಯನ್ನು ಮಾಡಲಾಗುವುದು. ಅದರ ಜವಾಬ್ದಾರಿಯನ್ನು ಸ್ಥಳೀಯ ಗ್ರಾಪಂಗಳಿಗೆ ವಹಿಸಿಕೊಡಲಾಗುವುದು. ಯಾವುದೇ ಮತದಾರರು ರಾಜಕೀಯ ವ್ಯಕ್ತಿಗಳ ವಾಹನಗಳಿಂದ ಆಮಿಷಕ್ಕೆ ಒಳಗಾಗಬಾರದು. ಸಾರಿಗೆ ವ್ಯವಸ್ಥೆ ಇಲ್ಲದ ಗ್ರಾಮೀಣ ಪ್ರದೇಶದಲ್ಲೂ ವಾಹನ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮತಗಟ್ಟೆ ಸಮೀಪದ ಬೂತ್‌ಗಳಲ್ಲಿ ಮಾತ್ರವಲ್ಲ ಯಾವುದೇ ಭಾಗದಲ್ಲೂ ಮತದಾನ ಮಾಡುವಂತೆ ಮತದಾರರಿಗೆ ಆಮಿಷವೊಡ್ಡುವಂತಿಲ್ಲ. ಅಂತಹ ಘಟನೆ ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ಸಿ-ವಿಸಿಲ್ ಎಂಬ ಆ್ಯಪ್ ಮೂಲಕ ದೂರು ನೀಡಬಹುದಾಗಿದೆ ಎಂದ ಅವರು, ಮತದಾರರ ಪಟ್ಟಿ ಯಲ್ಲಿರುವ ಎಲ್ಲರಿಗೂ ಸ್ಲಿಪ್ ನೀಡುವ ವ್ಯವಸ್ಥೆ ಮಾಡಲಾಗುವುದು. ಸ್ಲಿಪ್ ಇಲ್ಲದಿದ್ದರೂ ಪಟ್ಟಿಯಲ್ಲಿ ಹೆಸರು ಇರುವವರು ಮತ ಚಲಾಯಿಸಬಹುದಾಗಿದೆ ಎಂದರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷೆ ಹಾಗೂ ಜಿಪಂ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಸಿಂಧೂ ಬಿ.ರೂಪೇಶ್ ಮಾತನಾಡಿ, ಜಿಲ್ಲೆಯ 701 ಕಟ್ಟಡಗಳಲ್ಲಿ 1111 ಮತಗಟ್ಟೆಗಳಿದ್ದು, ಬಹುತೇಕ ಕಡೆಗಳಲ್ಲಿ ಮತ ಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯ ನಡೆಸಲಾಗಿದೆ. ಇನ್ನು ಬಾಕಿ ಇರುವ 51 ಮತಗಟ್ಟೆಗಳಲ್ಲಿ ಸದ್ಯದಲ್ಲೇ ಪ್ರಾತ್ಯಕ್ಷಿಕೆ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದರು.

ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ನಡೆಸಿದ ಮತದಾನ ಪ್ರಾತ್ಯಕ್ಷಿಕೆಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನ ಸಂಬಂಧ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಒಟ್ಟು 35 ವಿದ್ಯಾರ್ಥಿ ರಾಯಭಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಬೇಕಾದ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿಯಾಗಿರುವ ತಾಪಂ ಕಾರ್ಯ ನಿರ್ವಹಣಾಧಿಕಾರಿ ರಾಜು ಕೆ. ಮತಯಂತ್ರದಲ್ಲಿ ಮತದಾನ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಸಾ್ವಗತಿಸಿ, ಕಾರ್ಯಕ್ರಮ ನಿರೂಪಿಸಿದರು.

‘ನಿಷೇಧಿತ ಸ್ಥಳದಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ’
ನಿಷೇಧಿತ ಉಡುಪಿ ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿ ಬಿಜೆಪಿ ನಡೆಸ ಲಿರುವ ಚುನಾವಣಾ ಕಾರ್ಯಕ್ರಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನಿಷೇಧಿತ ಸ್ಥಳಗಳಲ್ಲಿ ಯಾವುದೇ ಚುನಾವಣಾ ಸಂಬಂಧಿತ ಕಾರ್ಯಕ್ರಮಗಳಿಗೆ ಅವಕಾಶ ನೀಡಲು ಆಗುವುದಿಲ್ಲ. ಈ ಬಗ್ಗೆ ಪರಿಶೀಲನೆ ನೆಸಲಾಗುವುದು ಎಂದು ಹೇಳಿದರು.

ಉಡುಪಿ ಜಿಲ್ಲೆಗೆ ಅವಶ್ಯಕತೆ ಇರುವ ಮಿಲಿಟರಿ ಪಡೆಯ ಬಗ್ಗೆ ಎಸ್ಪಿಯವರು ಈಗಾಗಲೇ ಕೇಂದ್ರೀಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅದರಂತೆ ಜಿಲ್ಲೆಗೆ ಭದ್ರತೆಯನ್ನು ಒದಗಿಸಲಾಗುತ್ತದೆ. ಎರಡು ಕಡೆ ಪತ್ತೆಯಾದ ದಾಖಲೆ ಇಲ್ಲದ ನಗದು ಪೈಕಿ ಮಾಳ ಚೆಕ್‌ಪೊಸ್ಟ್‌ನಲ್ಲಿ ವಶಪಡಿಸಿಕೊಂಡ 1.5ಲಕ್ಷ ರೂ. ನಗದನ್ನು ದಾಖಲೆ ನೀಡಿದ ಕಾರಣಕ್ಕೆ ಹಿಂತಿರುಗಿಸಲಾಗಿದೆ ಎಂದರು.

ಚುನಾವಣೆ ಸಂದರ್ಭ ಖಾಸಗಿ ಹಾಗೂ ಕೆಎಸ್‌ಆರ್‌ಟಿ ಬಸ್ ಪ್ರಯಾಣ ದರ ಏರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ: ಡಿಸಿ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಾರದಲ್ಲಿ ಮೂರು ದಿನಕ್ಕೊಮ್ಮೆ ನೀಡುವ ವ್ಯವಸ್ಥೆ ಮಾಡಲಾಗುವುದು. ಯಾವ ವಾರ್ಡ್‌ಗೆ ಯಾವ ದಿನ ಎಂಬುದರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಅದೇ ರೀತಿ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡಲಾಗುತ್ತದೆ. ಅದಕ್ಕೆ ಗ್ರಾಪಂ ಮಟ್ಟದಲ್ಲಿಯೇ ಟೆಂಡರ್ ಕರೆ ಯಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೊರ್ಲಪಾಟಿ ತಿಳಿಸಿದರು.
ಯುಪಿಸಿಎಲ್ ವಿರುದ್ಧ ಹಸಿರು ಪೀಠ ನೀಡಿದ ತೀರ್ಪಿನ ಕುರಿತು ಪತ್ರಿಕೆಯ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ಆ ಬಗ್ಗೆ ಈವರೆಗೆ ಜಿಲ್ಲಾಡಳಿತಕ್ಕೆ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News