ಹಫ್ತಾ ಬೆದರಿಕೆ: ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

Update: 2019-03-23 15:24 GMT
ಧನರಾಜ್ ಪೂಜಾರಿ, ಧನರಾಜ್ ಸಾಲ್ಯಾನ್, ರವಿಚಂದ್ರ ಪೂಜಾರಿ, ಶಶಿ ಪೂಜಾರಿ

ಬ್ರಹ್ಮಾವರ, ಮಾ.23: ಹಫ್ತಾ ಹಣ ನೀಡುವಂತೆ ಉಡುಪಿಯ ಉದ್ಯಮಿ, ಉಪ್ಪೂರು ಕೆ.ಜಿ.ರಸ್ತೆಯ ನಿವಾಸಿ ರತ್ನಾಕರ ಡಿ.ಶೆಟ್ಟಿ ಎಂಬವರಿಗೆ ಬೆದರಿಕೆ ಯೊಡ್ಡಿದ್ದ ಪ್ರಕರಣದಲ್ಲಿ ಉಡುಪಿ ಡಿಸಿಐಬಿ ಪೊಲೀಸರಿಂದ ಬಂಧಿತರಾದ ಭೂಗತ ಪಾತಕಿ ಬನ್ನಂಜೆ ರಾಜನ ಐದು ಮಂದಿ ಸಹಚರರ ಪೈಕಿ ನಾಲ್ಕು ಮಂದಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿಗಳಾದ ಶಶಿ ಪೂಜಾರಿ, ರವಿಚಂದ್ರ ಪೂಜಾರಿ, ಧನರಾಜ್ ಪೂಜಾರಿ, ಧನರಾಜ್ ಸಾಲ್ಯಾನ್, ಉಲ್ಲಾಸ ಶೆಣೈ ಎಂಬವರನ್ನು ಡಿಸಿಐಬಿ ಪೊಲೀಸರು ಮಾ.22ರಂದು ಬೆದರಿಕೆ ಕರೆ ಪ್ರಕರಣ ದಾಖಲಾಗಿರುವ ಬ್ರಹ್ಮಾವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಈ ಐವರನ್ನು ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇವರಲ್ಲಿ ಉಲ್ಲಾಸ್ ಶೆಣೈಗೆ ಜಾಮೀನು ಮಂಜೂರಾಗಿದ್ದು, ಉಳಿದ ನಾಲ್ವರನ್ನು ಮಾ.26ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು. ಕಸ್ಟಡಿಗೆ ಪಡೆದುಕೊಂಡ ಆರೋಪಿಗಳ ವಿಚಾರಣೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News