ಉಡುಪಿ ನಗರದಲ್ಲಿಮಾ.25ರಿಂದ ವಾರಕ್ಕೆ ಮೂರು ದಿನ ನೀರು

Update: 2019-03-23 16:58 GMT

ಉಡುಪಿ, ಮಾ.23: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಅಣೆಕಟ್ಟಿ ನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿರುವುದರಿಂದ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮೂರು ವಿಭಾಗಗಳನ್ನಾಗಿ ಮಾಡಿ ಮಾ.25ರಿಂದ ಎ.30ರವರೆಗೆ ವಾರಕ್ಕೆ ಮೂರು ದಿನಗಳ ಕಾಲ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ಇಂದು 4.34ಮೀಟರ್‌ನಷ್ಟು ನೀರಿದ್ದರೆ, ಕಳೆದ ವರ್ಷ ಇದೇ ದಿನ 5.35ಮೀಟರ್ ನೀರಿನ ಸಂಗ್ರಹ ಇತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣದಲ್ಲಿ ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಈ ರೀತಿ ಮಾಡುವುದರಿಂದ ಮೇ ಮೊದಲ ವಾರದವರೆಗೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ.
ಮುಂದೆ ಮೇ ತಿಂಗಳಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ವಿತರಣಾ ವ್ಯವಸ್ಥೆಯನ್ನು ನಿರ್ಧರಿಸಲಾಗುವುದು. ಜೀವ ಜಲ ನೀರಿನ ಸಂರಕ್ಷಣೆ ಹಾಗೂ ಮಿತವಾದ ಬಳಕೆಗೆ ನಾಗರಿಕರು ಆದ್ಯತೆ ನೀಡಿ ನೀರಿನ ಅಭಾವ ಇರುವ ಸಮಯದಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಲಿಕರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

‘ಸೋಮವಾರದಿಂದ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಾರದಲ್ಲಿ ಮೂರು ದಿನಗಳ ಕಾಲ ನೀಡುವ ವ್ಯವಸ್ಥೆ ಆರಂಭಿಸಲು ನಿರ್ಧರಿಸಲಾಗಿದ್ದು, ಮುಂದಿನ ಹೆಜ್ಜೆ ಬಗ್ಗೆ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳಿಂದ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅದೇ ರೀತಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅಗತ್ಯ ಇರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಅದಕ್ಕೆ ಗ್ರಾಪಂ ಮಟ್ಟದಲ್ಲಿಯೇ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News